ಜುಲೈ 8, 2023ರಂದು ಕೋಲ್ಕತಾ ಹೊರವಲಯದಲ್ಲಿ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ವೇಳೆ ಮತ ಚಲಾಯಿಲು ಮತಗಟ್ಟೆಯೊಂದರ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿರುವಂತೆಯೇ ಅರೆ ಸೈನಿಕ ಪಡೆಯ ಯೋಧ ಕಾವಲು ಕಾಯುತ್ತಿರುವುದು. (ಎಎಫ್‌ಪಿ/ದಿಬ್ಯಾಂಶು ಸರ್ಕಾರ್)

2024ರ ಭಾರತೀಯ ಚುನಾವಣೆ: ಪತ್ರಕರ್ತರ ಸುರಕ್ಷತಾ ಕಿಟ್

2024ರಲ್ಲಿ, ಆಳುವ ಭಾರತೀಯ ಜನತಾ ಪಕ್ಷವು ಐದು ವರ್ಷಗಳ ಅವಧಿಗೆ ಸತತ ಮೂರನೇ ಬಾರಿಗೆ ಪುನರಾಯ್ಕೆ ಕೋರುತ್ತಿದೆ. ಮುಂಬರಲಿರುವ ಎಪ್ರಿಲ್ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದ 60 ಕೋಟಿಗೂ ಹೆಚ್ಚಿರುವ ಭಾರತೀಯ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

ಈ ಚುನಾವಣೆಯ ವರದಿ ಮಾಡಲಿರುವ ಪತ್ರಕರ್ತರಿಗಾಗಿ ಸಿಪಿಜೆಯ ತುರ್ತು ಪ್ರತಿಕ್ರಿಯಾ ತಂಡ (ಇಆರ್‌ಟಿ)ವು ಒಂದು ಸುರಕ್ಷತಾ ಕಿಟ್ ಸಿದ್ಧಪಡಿಸಿದೆ. ಈ ಕಿಟ್‌ನಲ್ಲಿ ಸಂಪಾದಕರು, ವರದಿಗಾರರು ಮತ್ತು ಛಾಯಾಗ್ರಾಹಕರಿಗಾಗಿ ಚುನಾವಣೆಗೆ ಹೇಗೆ ಸಿದ್ಧತೆ ನಡೆಸಬೇಕು ಮತ್ತು ಡಿಜಿಟಲ್, ದೈಹಿಕ ಮತ್ತು ಮಾನಸಿಕ ಅಪಾಯಗಳನ್ನು ಹೇಗೆ ಕಡಿಮೆ ಮಾಡಬೇಕು ಎಂಬ ಕುರಿತು ಮಾಹಿತಿಯನ್ನು ಹೊಂದಿದೆ.

ಭಾರತದಲ್ಲಿ ಕಳೆದ ಹಲವು ವರ್ಷಗಳಲ್ಲಿ ವಿಶೇಷವಾಗಿ ಸೂಕ್ಷ್ಮ  ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರಕರ್ತರ ಮೇಲೆ ಹೆಚ್ಚುತ್ತಿರುವ ಒತ್ತಡ, ಸೆನ್ಸಾರ್‌ಶಿಪ್ ಯತ್ನಗಳು ಮತ್ತು ವರದಿಗಾರಿಕೆಗೆ ಮೀತಿ ಹೇರಿದ ಘಟನೆಗಳು ನಡೆದಿವೆ. ಕಳೆದ ಸಾರ್ವತ್ರಿಕ ಚುನಾವಣೆಯ ಪ್ರವೃತ್ತಿಗಳ ಮತ್ತು ಕಳೆದ ಐದು ವರ್ಷಗಳಲ್ಲಿ, ಸಶಸ್ತ್ರ ಸಂಘರ್ಷ ಮತ್ತು ಸ್ಥಳೀಯ ಘಟನೆಗಳ ಮಾಹಿತಿ ಯೋಜನೆ (Armed Conflict & Location Event Data ProjectACLED)ಯು ಮಾಹಿತಿಗಳು ಪತ್ರಕರ್ತರ ಮೇಲೆ ದೈಹಿಕ ದಾಳಿಗಳು, ಗುಂಪು ಹಿಂಸಾಚಾರ ಮತ್ತು ಹಿಂಸಾತ್ಮಕ ಮತಪ್ರದರ್ಶನಗಳಿಂದ ಉಂಟಾಗುತ್ತಿರುವ, ಹೆಚ್ಚುತ್ತಿರುವ ಅಪಾಯಗಳನ್ನು ಬಹಿರಂಗಪಡಿಸುತ್ತವೆ. ಅದೇ ಹೊತ್ತಿಗೆ ಪತ್ರಕರ್ತರು ಹೆಚ್ಚುತ್ತಿರುವ ಸಾಮಾಜಿಕ ಮಾಧ್ಯಮಗಳ ಟ್ರೋಲಿಂಗ್, ಆನ್‌ಲೈನ್ ಕಿರುಕುಳ, ಸೈಬರ್ ಬೆದರಿಕೆಗಳು ಮತ್ತು ಡಿಜಿಟಲ್ ಕಣ್ಗಾವಲು ಮುಂತಾದವುಗಳನ್ನು ಕೂಡಾ ಅನಿವಾರ್ಯವಾಗಿ ಎದುರಿಸಬೇಕಾಗಿಬಂದಿದೆ. ಈ ಸಂಯೋಜಿತ ದಾಳಿಗಳ ಪರಿಣಾಮವಾಗಿ ಸುದ್ದಿಮನೆಗಳು ಮಾತ್ರವಲ್ಲದೇ ಇಡೀ ಮಾಧ್ಯಮ ರಂಗವೇ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಎದುರಿಸುತ್ತಿವೆ.

ಮೂಲ: Armed Conflict Location & Event Data Project (ACLED); http://www.acleddata.com/

ಎಸಿಎಲ್‌ಇಡಿ (ACLED) ಮಾಹಿತಿ ಕೋಶವು ಘಟನೆಗಳನ್ನು ಆಧರಿಸಿದ ಮಾಹಿತಿ ಕೋಶವಾಗಿದ್ದು,  ರಾಜಕೀಯ ಹಿಂಸಾಚಾರ, ಮತಪ್ರದರ್ಶನಗಳ ಮತ್ತು ಜಗತ್ತಿನಾದ್ಯಂತದ ಆಯ್ದ ಅಹಿಂಸಾತ್ಮಕ ಬೆಳವಣಿಗೆಗಳ ವಿಂಗಡಿಸಿದ (ವರ್ಗೀಕೃತ) ಮಾಹಿತಿಗಳನ್ನು ಹೊಂದಿದೆ. 
ಎಸಿಎಲ್‌ಇಡಿ ಮಾಹಿತಿಗಳನ್ನು ನೈಜ ಸಮಯದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸಾಪ್ತಾಹಿಕವಾಗಿ ಪ್ರಕಟಿಸಲಾಗುತ್ತದೆ. ಎಸಿಎಲ್‌ಇಡಿ ದತ್ತಾಂಶವು ಘಟನೆಗಳ ನಮೂನೆ (ವಿಧ), ಶಾಮೀಲಾದವರು, ಸ್ಥಳ, ದಿನಾಂಕ ಮತ್ತು ಈ ಘಟನೆಗಳ ಇತರ ಗುಣಲಕ್ಷಣಗಳ ಕುರಿತು ವಿವರ ನೀಡುತ್ತದೆ. ಎಸಿಎಲ್‌ಇಡಿಯ ಕಾರ್ಯವಿಧಾನ ಅಥವಾ ಮೆಥಡಾಲಜಿಯ ವಿವರವಾದ ಮಾಹಿತಿ ತಿಳಿಯಲು ಎಸಿಎಲ್‌ಇಡಿಯ ಕೋಡ್‌ಬುಕ್ ನೋಡಿ.

ದತ್ತಾಂಶ ದೃಶ್ಯೀಕರಣ (data visualization) ಕುರಿತ ಹಿನ್ನೆಲೆ ವಿವರಣೆ ಕುಣಾಲ್ ಮುಜುಮ್ದಾರ್

ಮೂಲ: Armed Conflict Location & Event Data Project (ACLED); http://www.acleddata.com/www.acleddata.com

ಎಸಿಎಲ್‌ಇಡಿ ದತ್ತಾಂಶವು 2019ರ ಸಾರ್ವತ್ರಿಕ  ಚುನಾವಣೆಗಳಿಗೆ ಬರುತ್ತಾ, ವಿಶೇಷವಾಗಿ ಪಶ್ಚಿಮ ಬಂಗಾಳ, ತಮಿಳುನಾಡು, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ದೈಹಿಕ ಹಿಂಸಾಚಾರದಲ್ಲಿ ತೀವ್ರ ಹೆಚ್ಚಳವನ್ನು ಎತ್ತಿತೋರಿಸುತ್ತದೆ. ಅದೇ ಹೊತ್ತಿಗೆ ಸಿಪಿಜೆಯ ದಾಖಲೀಕರಣ ಮತ್ತು ಆ ಸಮಯದ ಮಾಧ್ಯಮ ವರದಿಗಳು ಪತ್ರಕರ್ತರ ಮೇಲಿನ ದೈಹಿಕ ದಾಳಿಗಳು ಮತ್ತು ಬೆದರಿಕೆಗಳಲ್ಲಿಯೂ ಹೆಚ್ಚಳವಾಗಿರುವುದನ್ನು ಸೂಚಿಸುತ್ತವೆ.

ಉದಾಹರಣೆಗೆ ಫೆಬ್ರವರಿ 2019ರಂದು ಭಾರತೀಯ ಜನತಾ ಪಕ್ಷದ ಬೆಂಬಲಿಗರೆನ್ನಲಾದವರು, ಛತ್ತೀಸ್‌ಗಢದಲ್ಲಿ ಪಕ್ಷದ ಕಾರ್ಯಕರ್ತರ ನಡುವಿನ ಹೊಡೆದಾಟದ ರೆಕಾರ್ಡಿಂಗ್ ಮಾಡಿದ್ದಕ್ಕಾಗಿ ಒಬ್ಬರು ಪತ್ರಕರ್ತರ ಮೇಲೆ ಹಲ್ಲೆ  ಮಾಡಿದರು. ಎಪ್ರಿಲ್ 2019ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಂಬಲಿಗರೆಂದು ಹೇಳಿಕೊಂಡವರು ತಮಿಳುನಾಡಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಖಾಲಿ ಕುರ್ಚಿಗಳ ಚಿತ್ರ ತೆಗೆಯುತ್ತಿದ್ದಾಗ ಪತ್ರಿಕಾ ಛಾಯಾಗ್ರಾಹಕರ ಮೇಲೆ ದಾಳಿ ನಡೆಸಿದರು. 

ಸಿಪಿಜೆ ಮೇ 6, 2019ರಂದು ದಾಖಲಿಸಿರುವಂತೆ ಪಶ್ಚಿಮ ಬಂಗಾಳವು ಪತ್ರಕರ್ತರ ವಿರುದ್ಧ ಹಿಂಸಾಚಾರ ಸೇರಿದಂತೆ ಗಾಬರಿಗೊಳಿಸುವ ಸಂಖ್ಯೆಯಲ್ಲಿ  ಇಂತಹಾ ಘಟನೆಗಳು ನಡೆದವು. ಕೋಲ್ಕತಾದ  ಬರಾಕ್‌ಪುರ್‌ನಲ್ಲಿ ಆಳುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವಣ ಸಂಘರ್ಷವು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಈ ಘಟನೆಗಳ ವರದಿ ಮಾಡುತ್ತಿದ್ದ ಪತ್ರಕರ್ತರು ಅವರ ವಾಹನಗಳಿಗೆ ಕಲ್ಲೆಸೆತವೂ ಸೇರಿದಂತೆ ಗಂಭೀರವಾದ ಬೆದರಿಕೆಗಳನ್ನು ಎದುರಿಸಬೇಕಾಯಿತು. ದುರದೃಷ್ಟವಶಾತ್, ಇಂತಹಾ ಗುರಿ ಮಾಡಿದ ದಾಳಿಗಳು ಅಲ್ಲೊಂದು ಇಲ್ಲೊಂದು ನಡೆದ ಘಟನೆಗಳಾಗಿರಲಿಲ್ಲ. ಅದೇ ದಿನ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ರಾಜಕೀಯ ಘರ್ಷಣೆಗಳು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಗುರಿ ಮಾಡುವುದಕ್ಕೆ ಕಾರಣವಾದವು. 

ಈ ಘಟನೆಗಳು- ಪತ್ರಕರ್ತರು ರಾಜಕೀಯ ಹಿಂಸಾಚಾರದ ಬಲಿಪಶುಗಳಾಗಿ ವಸ್ತುನಿಷ್ಟವಾಗಿ ಮತ್ತು ಮುಕ್ತವಾಗಿ ವರದಿ ಮಾಡುವ ಸಾಮರ್ಥ್ಯವನ್ನೇ ರಾಜಿ ಮಾಡಬೇಕಾದ ಒಂದು ಮತ್ತೆಮತ್ತೆ ಸಂಭವಿಸುವ ಒಂದು ಪೂರ್ವವಿನ್ಯಾಸವನ್ನು ಎತ್ತಿತೋರಿಸುತ್ತದೆ. ಎಸಿಎಲ್‌ಇಡಿ ದತ್ತಾಂಶಗಳ ಪ್ರಕಾರ ನಂತರದ ವರ್ಷಗಳಲ್ಲಿ ಉತ್ತರ ಪ್ರದೇಶ, ಕರ್ನಾಟಕ ಮತ್ತು ಮಣಿಪುರ ಸೇರಿದಂತೆ ಇತರ ಭಾರತೀಯ ರಾಜ್ಯಗಳು ದೈಹಿಕ ಹಿಂಸಾಚಾರದಲ್ಲಿ ಹೆಚ್ಚಳವನ್ನು ಕಂಡಿವೆ. 

ಮೇ 2019ರ ನಂತರದ ಸಿಪಿಜೆ ದಾಖಲೀಕರಣವು ಕೂಡಾ ಈ ರಾಜ್ಯಗಳಲ್ಲಿ ಪತ್ರಕರ್ತರ ವಿರುದ್ಧ ಹಿಂಸಾಚಾರ ಸ್ಥಿರವಾಗಿ ಏರುತ್ತಿರುವುದನ್ನು ಬಯಲುಮಾಡುತ್ತದೆ. 2019ರಿಂದೀಚೆಗೆ ಕೊಲೆಯಾದ 11ಪತ್ರಕರ್ತರಲ್ಲಿ ನಾಲ್ವರ ಕೊಲೆ ಉತ್ತರ ಪ್ರದೇಶದಲ್ಲಿ ನಡೆಯಿತು. ಡಿಸೆಂಬರ್ 2020ರಲ್ಲಿ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಉದ್ರಿಕ್ತ ಗುಂಪೊಂದು ಆ ಪ್ರದೇಶದಲ್ಲಿ ದನಗಳ ಅಕ್ರಮ ಕಸಾಯಿಖಾನೆಗಳು ಇರುವುದರ ಬಗ್ಗೆ ವರದಿ ಮಾಡಿದ್ದಕ್ಕಾಗಿ ಮಹಿಳಾ ಪತ್ರಕರ್ತರೊಬ್ಬರ ಮೇಲೆ ದಾಳಿ ಮಾಡಿತು. ಸೆಪ್ಟೆಂಬರ್ 2021ರಲ್ಲಿ ಮೈಸೂರಿನಲ್ಲಿ ಬಲಪಂಥೀಯ ಪ್ರತಿಭಟನಕಾರರು ತಮ್ಮ ಭಾಷಣವನ್ನು ರೆಕಾರ್ಡ್ ಮಾಡಿದ್ದಕ್ಕಾಗಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದರು. 

ಈ ಪತ್ರಿಕಾ ವೃತ್ತಿ ಸಂಬಂಧಿತ ದಾಳಿಗಳು ಬೆಳೆಯುತ್ತಿರುವ ಪ್ರವೃತ್ತಿಯು ಈ ಕುರಿತು ಹೆಚ್ಚಿನ ಗಮನ ಹರಿಸುವುದನ್ನು ಮತ್ತು ಪತ್ರಿಕೋದ್ಯಮದ ಸಮಗ್ರತೆ ಮತ್ತು ಭದ್ರತೆಗಳನ್ನು ರಕ್ಷಿಸುವ  ಮತ್ತು ವಿಶೇಷವಾಗಿ ರಾಜಕೀಯವಾಗಿ ಉದ್ವಿಗ್ನಗೊಂಡ ವಾತಾವರಣದಲ್ಲಿ ಮಾಹಿತಿಯ ಮುಕ್ತ ಹರಿವನ್ನು ಖಾತರಿಪಡಿಸುವ ಸಕ್ರಿಯ ಕ್ರಮಗಳನ್ನು ಅಗತ್ಯವಾಗಿಸಿದೆ.

ಸುರಕ್ಷತಾ ಕಿಟ್‌ನ ವಿಷಯಗಳು

ಪ್ರತಿಕೂಲ ಸ್ಥಿತಿಯಲ್ಲಿ ವರದಿ ಮಾಡಲು ಸಿಬ್ಬಂದಿಯನ್ನು ನಿಯೋಜಿಸುವಾಗಿನ ಸಂಪಾದಕರ ಸುರಕ್ಷತಾ ಚೆಕ್‌ಲಿಸ್ಟ್

ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಸಂಪಾದಕರು ಮತ್ತು ಸುದ್ದಿಮನೆಗಳು ತತ್ಕಾಲದಲ್ಲಿಯೇ ಪತ್ರಕರ್ತರನ್ನು ಸುದ್ದಿ ಮಾಡಲು ನಿಯೋಜಿಸಬೇಕಾಗುತ್ತದೆ. 

  • ಈ ಚೆಕ್‌ಲಿಸ್ಟ್ ಸಿಬ್ಬಂದಿಗೆ ಅಪಾಯವನ್ನು ಕಡಿಮೆ ಮಾಡಲು ಮುಖ್ಯ ಪ್ರಶ್ನೆಗಳು ಮತ್ತು ಪರಿಗಣಿಸಬೇಕಾದ ಕ್ರಮಗಳನ್ನು ಒಳಗೊಂಡಿದೆ. 
  • ನಿಮ್ಮ ಸಿಬ್ಬಂದಿ ನಿಯೋಜಿಸಲಾಗುವ ಕಾರ್ಯಭಾರಕ್ಕೆ ತಕ್ಕಷ್ಟು ಅನುಭವ ಹೊಂದಿದ್ದಾರೆಯೆ?
  • ಈ ಕಾರ್ಯಭಾರದ ವೇಳೆಯಲ್ಲಿ ಅವರ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಆರೋಗ್ಯ ಸಮಸ್ಯೆಗಳು ನಿಮ್ಮ ಸಿಬ್ಬಂದಿಗೆ ಇದೆಯೇ ಎಂದು ನೀವು ಅವರೊಂದಿಗೆ ಚರ್ಚಿಸಿದ್ದೀರಾ?
  • ನೀವು ನಿಯೋಜಿಸಲಾಗುವ ಎಲ್ಲಾ ಸಿಬ್ಬಂದಿಯ ತುರ್ತು ಸಂಪರ್ಕಗಳನ್ನು ದಾಖಲಿಸಿ ಸುರಕ್ಷಿತವಾಗಿ ಸೇವ್ ಮಾಡಿಕೊಂಡಿದ್ದೀರಾ?
  • ನಿಮ್ಮ ತಂಡದ ಬಳಿ ಸೂಕ್ತವಾದ ಗುರುತುಪತ್ರ, ಪ್ರೆಸ್ ಪಾಸುಗಳು ಅಥವಾ ಅವರು ನಿಮ್ಮ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸುವ ಅಧಿಕೃತ ಪತ್ರ ಇದೆಯೇ?
  • ಈ ವರದಿ ಮಾಡುವುದರಲ್ಲಿ ನಿಮ್ಮ ತಂಡವು ಯಾವ ಮಟ್ಟದ ಅಪಾಯ ಎದುರಿಸಬಹುದು ಎಂಬುದನ್ನು ನೀವು ಪರಿಗಣಿಸಿದ್ದೀರಾ? ಸಂಪಾದಕೀಯ ಲಾಭ ಅಥವಾ ಅನುಕೂಲತೆಗಾಗಿ ಆ ಮಟ್ಟದ ಅಪಾಯ ಸ್ವೀಕಾರಾರ್ಹವೆ?
  • ಅಪಾಯದ ಸಾಧ್ಯತೆ ಮತ್ತು ಸಿಬ್ಬಂದಿಯ ಸುರಕ್ಷಿತತೆಗಾಗಿ ಕೈಗೊಂಡ ಕ್ರಮಗಳನ್ನು ವಿವರಿಸಿ (ಅಗತ್ಯ ಬಿದ್ದರೆ, ಇನ್ನೊಂದು ಕಾಗದದ ಹಾಳೆಯಲ್ಲಿ ಬರೆದು ಲಗತ್ತಿಸಿ):
  • ನಿಯೋಜಿಸಲಾಗುವ ಯಾವುದೇ ಪತ್ರಕರ್ತರ ಪಾತ್ರ  ಅಥವಾ ವೈಯಕ್ತಿಕ  ವಿವರ ಅವರನ್ನು ಇನ್ನಷ್ಟು ಹೆಚ್ಚಿನ ಅಪಾಯಕ್ಕೆ ಸಿಲುಕಿಸಬಹುದೆ? (ಉದಾಹರಣೆಗೆ ಘಟನಾ ಸ್ಥಳಕ್ಕೆ ತೀರಾ ಹತ್ತಿರದಲ್ಲಿ ಕೆಲಸ ಮಾಡುವ ಪತ್ರಿಕಾ ಛಾಯಾಗ್ರಾಹಕರು ಅಥವಾ ಮಹಿಳಾ ಪತ್ರಕರ್ತರು) ಹೌದೆಂದಾದರೆ ವಿವರ ನೀಡಿ:
  • ಬಾಡಿ ಆರ್ಮರ್, ಉಸಿರಾಡಲು ರೆಸ್ಪಿರೇಟರ್ ಅಥವಾ ಒಂದು ವೈದ್ಯಕೀಯ ಕಿಟ್‌ನಂತಹ ವಿಶೇಷ ಸಾಧನ ಸಲಕರಣೆಗಳು ನಿಮ್ಮ ಸಿಬ್ಬಂದಿಗೆ ಬೇಕಾಗಬಹುದೆ? ಅಗತ್ಯ ಬಿದ್ದರೆ ನಿಮ್ಮ ಪತ್ರಕರ್ತರಿಗೆ ಅದು ಸಿಗಬಹುದೆ? ಮತ್ತು ಅವುಗಳನ್ನು ಹೇಗೆ ಬಳಸಬೇಕೆಂದು ಅವರಿಗೆ ಗೊತ್ತಿದೆಯೆ?
  • ಪತ್ರಕರ್ತರು ತಮ್ಮ ವಾಹನಗಳನ್ನು ತಾವೇ ಚಲಾಯಿಸುತ್ತಿದ್ದಾರೆಯೆ? ಹೌದೆಂದಾದರೆ ಅವರ ವಾಹನಗಳು ಪ್ರಯಾಣಕ್ಕೆ ಯೋಗ್ಯವಾಗಿವೆಯೇ ಮತ್ತು ಸೂಕ್ತವಾಗಿವೆಯೆ?
  • ಅಗತ್ಯ ಬಿದ್ದರೆ ನೀವು ಹೇಗೆ ಅವರನ್ನು ಸಂಪರ್ಕಿಸುತ್ತೀರಿ ಮತ್ತು ಅವರು ಹೇಗೆ ತಮ್ಮನ್ನು ಒಂದು ಕಠಿಣ ಪರಿಸ್ಥಿತಿಯಿಂದ ಹೊರತೆಗೆಯಬಹುದು ಎಂಬುದನ್ನು ಗುರುತಿಸಿ ಅಂದಾಜು ಮಾಡಿದ್ದೀರಾ? ಹಾಗಿದ್ದಲ್ಲಿ ಕೆಳಗೆ ವಿವರ ನೀಡಿ:
  • ಒಂದು ವೇಳೆ ಗಾಯಾಳುಗಳಾದರೆ, ಸ್ಥಳೀಯವಾಗಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ನೀವು ಗುರತಿಸಿದ್ದೀರಾ? ಹೌದೆಂದಾದರೆ ಕೆಳಗೆ ದಾಖಲಿಸಿ:
  • ತಂಡಕ್ಕೆ ಸರಿಯಾದ ರೀತಿಯಲ್ಲಿ ವಿಮೆ ಮಾಡಿಸಲಾಗಿದೆಯೆ? ಅವರಿಗೆ ಸೂಕ್ತವಾದ ವೈದ್ಯಕೀಯ ವಿಮೆಯ ರಕ್ಷಣೆಯನ್ನು ನೀವು ಮಾಡಿಸಿದ್ದೀರ?
  • ಆತಂತ-ಆಘಾತ-ಗಾಯದ ದೀರ್ಘಕಾಲೀನ ಪರಿಣಾಮ, ಒತ್ತಡಗಳ ಬಗ್ಗೆ ನೀವು ಯೋಚಿಸಿದ್ದೀರ?

ಅಪಾಯದ ಅಂದಾಜು ಮತ್ತು ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಿಪಿಜೆ ಸಂಪನ್ಮೂಲ ಕೇಂದ್ರವನ್ನು ನೋಡಿ.

ಡಿಜಿಟಲ್ ಸುರಕ್ಷೆ: ಮೂಲಭೂತ ವಿಷಯಗಳು

ಆನ್‌ಲೈನ್ ಇರುವಾಗ ಮತ್ತು ಸಾಧನಗಳನ್ನು ಉಪಯೋಗಿಸುತ್ತಿರುವಾಗ ಹೆಚ್ಚು ಸುರಕ್ಷಿತವಾಗಿರಲು ಡಿಜಿಟಲ್ ಸುರಕ್ಷೆಯ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮಹತ್ವದ ವಿಷಯ. ಕೆಳಗಿನವು ಚುನಾವಣೆಯ ವರದಿ ಮಾಡುವ ಪತ್ರಕರ್ತರಿಗಾಗಿ ಕೆಲವು ಅತ್ಯುತ್ತಮ ಅಭ್ಯಾಸಗಳು:

ನಿಮ್ಮ ಅಕೌಂಟ್‌ಗಳನ್ನು ಸುರಕ್ಷಿತವಾಗಿರಿಸಿ
  • ನಿಮ್ಮ ಆನ್‌ಲೈನ್ ಖಾತೆಗಳಿಗೆ ಎರಡಂಶಗಳ ದೃಢೀಕರಣ (two-factor authentication -2FA)ವನ್ನು ಚಾಲನೆಗೆ ತರುವುದರ ಮೂಲಕ ನೀವು ನಿಮ್ಮ ಖಾತೆಗಳನ್ನು ಹ್ಯಾಕಿಂಗ್‌ನಿಂದ ರಕ್ಷಿಸಬಹುದು. ಎಸ್‌ಎಂಎಸ್ ಬಳಸುವ ಬದಲು Authyಯಂತಹ ಒಂದು ಅಥೆಂಟಿಕೇಟರ್ ಆಪ್ (app) ಬಳಸಿ. 
  • ಪ್ರತಿಯೊಂದು ಅಕೌಂಟಿಗೆ ನೀವು ಎಲ್ಲಿ 2ಎಫ್‌ಎಯನ್ನು ತಂದಿದ್ದೀರೋ, ನಿಮ್ಮ ಬಳಿ ಬ್ಯಾಕ್‌ಅಪ್ ಕೋಡ್‌ಗಳ ಒಂದು ಪ್ರತಿ (ಕಾಪಿ) ಇರಬೇಕು. ನಿಮ್ಮ ಅಥೆಂಟಿಕೇಟರ್ ಆಪ್ ತೆರೆಯಲು ಆಗದಿದ್ದರೆ, ಅದು ನಿಮಗೆ ಅದನ್ನು ತೆರೆಯಲು ಅನುವು ಮಾಡಿಕೊಡುತ್ತದೆ. 
  • ಸುರಕ್ಷಿತ ಪಾಸ್‌ವರ್ಡ್‌ಗಳನ್ನು ಸೃಷ್ಟಿಸುವುದಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ಅಂದರೆ, ಗೈಡ್‌ಲೈನ್‌ಗಳನ್ನು ಅನುಸರಿಸಿ. ಇವುಗಳಲ್ಲಿ ಪ್ರತಿಯೊಂದೂ ಖಾತೆಗೆ ಬೇರೆಬೇರೆ ಪಾಸ್‌ವರ್ಡುಗಳಿರಬೇಕು ಮತ್ತು ಅವು ೧೫ಕ್ಕಿಂತ ಹೆಚ್ಚು ಅಂಕಿ, ಅಕ್ಷರಗಳನ್ನು ಹೊಂದಿರಬೇಕು; ನಿಮ್ಮ ಪಾಸ್‌ವರ್ಡುಗಳಲ್ಲಿ ಯಾವುದೇ ವೈಯಕ್ತಿಕ ಮಾಹಿತಿಗಳು ಇರಬಾರದು ಇತ್ಯಾದಿ ಸೇರಿವೆ.
  • ನಿಮ್ಮ ಅಕೌಂಟನ್ನು ಆಗಾಗ ಪರಿಶೀಲಿಸುತ್ತಾ ಇರಿ ಮತ್ತು ಒಂದು ವೇಳೆ ನಿಮ್ಮ ಅಕೌಂಟ್ ಹ್ಯಾಕ್ ಆದರೆ, ಬೇರೆಯವರು ನೋಡಬಾರದು ಎಂದು ನೀವು ಬಯಸುವ ವಿಷಯಗಳನ್ನು ಬ್ಯಾಕಪ್ ಮಾಡಿ ಇಲ್ಲವೇ ಅಳಿಸಿಹಾಕಿ ಅಂದರೆ, ಡಿಲೀಟ್ ಮಾಡಿ. 
  • ನಿಮ್ಮ ಖಾತೆಗಳ ಚಟುವಟಿಕೆ ತೋರಿಸುವ “ಅಕೌಂಟ್ ಆಕ್ಟಿವಿಟಿ” ವಿಭಾಗವನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ. ನೀವು ಗುರುತಿಸಿರದ ಡಿವೈಸ್ (ಸಾಧನ) ಲಾಗಿನ್ ಆಗಿದ್ದರೆ, ನೀವು ಆ ನಿರ್ದಿಷ್ಟ ಡಿವೈಸ್‌ನಿಂದ ಲಾಗೌಟ್ ಆಗಿ ಹೊರಬರಬೇಕು.
ಫಿಶಿಂಗ್ (phishing)ನಿಂದಉತ್ತಮರಕ್ಷಣೆ
  • ಸಾಮಾನ್ಯವಾಗಿ ಚುನಾವಣೆಯ ಅವಧಿಯಲ್ಲಿ ಫಿಶಿಂಗ್ ಚಟುವಟಿಕೆಗಳಲ್ಲಿ ಹೆಚ್ಚಳ ಕಂಡುಬರುತ್ತದೆ. ಈ ಸಂದೇಶಗಳು ನೀವು ಸೂಕ್ಷ್ಮ  ಮಾಹಿತಿಗಳನ್ನು ಯಾವುದೋ ಒಂದು ವೆಬ್‌ಸೈಟಿಗೆ ಸಲ್ಲಿಸುವಂತೆ ಮೋಸಮಾಡಬಹುದು ಅಥವಾ ಅವು ಕೆಲವು ಲಿಂಕ್ ಅಥವಾ ಡೌನ್‌ಲೋಡ್‌ಗಳನ್ನು ಹೊಂದಿರಬಹುದು. ನೀವಿದನ್ನು ಕ್ಲಿಕ್ ಮಾಡಿದಾಕ್ಷಣ ನಿಮ್ಮ ಸಾಧನದ ಒಳಗೆ ಅಪಾಯಕಾರಿ ಮಾಲ್‌ವೇರ್ ಪ್ರವೇಶಿಸಬಹುದು.
  • ಏನನ್ನಾದರೂ ಬೇಗನೇ ಮಾಡಬೇಕೆಂದು ಒತ್ತಾಯಿಸುವ ಅಥವಾ ನಂಬಲಸಾಧ್ಯ ಕೊಡುಗೆಗಳನ್ನು ನೀಡುವ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದಿರಿ.
  • ಸಂದೇಶ ಕಳಿಸಿದವರ ಅಕೌಂಟಿನ ವಿವರಗಳನ್ನು ಪರಿಶೀಲಿಸಿ, ಸಂದೇಶವನ್ನು ಜಾಗರೂಕತೆಯಿಂದ ಅದು ಸಾಚಾವೇ ಎಂದು ನೋಡಿ. ಸ್ಪೆಲ್ಲಿಂಗ್‌ನಲ್ಲಿ, ವ್ಯಾಕರಣ, ವಿನ್ಯಾಸ ಅಥವಾ ಬಣ್ಣದಲ್ಲಿ ಚಿಕ್ಕಪುಟ್ಟ ವ್ಯತ್ಯಾಸಗಳು ಆ ಖಾತೆ ಫಿಶಿಂಗ್ ಮಾಡಲಾಗಿದೆ ಅಥವಾ ಹ್ಯಾಕ್ ಮಾಡಲಾಗಿದೆ ಎಂಬುದರ ಸೂಚನೆಯಾಗಿದೆ.
  • ಸಂದೇಶ ಅನಿರೀಕ್ಷಿತ ಆಥವಾ ಸಂಶಯಾಸ್ಪದವಾಗಿದ್ದರೆ,  ಬೇರೊಂದು ವಿಧಾನದ ಮೂಲಕ, ಉದಾಹರಣೆಗೆ ನೇರವಾಗಿ ಫೋನ್ ಕರೆ ಮಾಡುವುದರ ಮೂಲಕ ಸಂದೇಶವನ್ನು ಪರೀಕ್ಷಿಸಿ.
  • ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೊದಲು ಜಾಗರೂಕತೆಯಿಂದ ಯೋಚನೆ ಮಾಡಿ. ನಿಮ್ಮ ಕರ್ಸರನ್ನು ಅದರ ಮೇಲೆ ಸ್ವಲ್ಪ ಕಾಲ ನಿಲ್ಲಿಸಿ ಯುಆರ್‌ಎಲ್ ಅಸಲಿಯೆಂದು ಕಾಣುತ್ತದೆಯೇ ಚಿಂತಿಸಿ.
  • ಇಮೈಲ್‌ನಲ್ಲಿ ಕಳುಹಿಸಲಾದ ಅಟಾಚ್‌ಮೆಂಟ್‌ (ಅಡಕ)ಗಳ ಪ್ರಿವ್ಯೂ ಗಮನಿಸಿ. ನೀವು ಆ ದಾಖಲೆಯನ್ನು ಡೌನ್‌ಲೋಡ್ ಮಾಡದಿದ್ದರೆ ಮಾಲ್‌ವೇರ್‌ನಿಂದ ರಕ್ಷಿಸಿಕೊಳ್ಳಲು ಸಾಧ್ಯ. ಸಂಶಯವಿದ್ದರೆ, ಅದರಲ್ಲಿ ಇರುವ ವಿಷಯದ ಕಾಪಿ (ಪ್ರತಿ) ಕಳುಹಿಸಲು ಹೇಳಿ ಅಥವಾ ಡೌನ್‌ಲೋಡ್ ಮಾಡದೆ ಪ್ರಿವ್ಯೂನ ಸ್ಕ್ರೀನ್ ಶಾಟ್ ಮಾತ್ರವೇ ತೆಗೆದುಕೊಳ್ಳಿ.

ಹೆಚ್ಚು ವಿವರವಾದ ಮಾಹಿತಿಗಾಗಿ ಸಿಪಿಜೆಯ ಡಿಜಿಟಲ್ ಸುರಕ್ಷಾ ಕಿಟ್ ನೋಡಿ.

ಭಾರತದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ನಂತರ ಮಾರ್ಚ್ 24, 2023ರಂದು ಹೊಸದಿಲ್ಲಿಯ ಅವರ ನಿವಾಸದ ಮುಂದೆ ಪೊಲೀಸರು ಮತ್ತು ಮಾಧ್ಯಮದವರು ನೆರೆದಿರುವುದು. ರಾಯ್ಟರ್ಸ್/ಅನುಶ್ರೀ ಫಡ್ನವೀಸ್

ಡಿಜಿಟಲ್ ಸುರಕ್ಷೆ: ಮೂಲಭೂತ ಸಾಧನ ಸಿದ್ಧತೆ

ಚುನಾವಣೆಯ ವರದಿ ಮಾಡುವಾಗ ಪತ್ರಕರ್ತರು ತಮ್ಮ ವರದಿ ಸಲ್ಲಿಸಲು ಮತ್ತು ಸಹೋದ್ಯೋಗಿಗಳು ಹಾಗೂ ಮೂಲಗಳ ಜೊತೆಗೆ ಸಂಪರ್ಕದಲ್ಲಿರಲು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸು ಸಾಧ್ಯತೆ ಇದೆ. ಪತ್ರಕರ್ತರನ್ನು ವಶಕ್ಕೆ ತೆದುಕೊಂಡರೆ, ಅವರ ಫೋನನ್ನು ವಶಪಡಿಸಿಕೊಂಡರೆ ಅಥವಾ ಅದು ಮುರಿದುಹೋದರೆ ಡಿಜಿಟಲ್ ಸುರಕ್ಷೆಯ ಸಮಸ್ಯೆಗಳು ಉಂಟಾಗಬಹುದು. ಸುದ್ದಿಮನೆಗಳಿಗೆ ದಾಳಿಗಳೂ ಸಂಭವಿಸಿ, ಕಂಪ್ಯೂಟರ್‌, ಮೊಬೈಲ್ ಇತ್ಯಾದಿ ಸಾಧನಗಳನ್ನು ಜಪ್ತಿ ಮಾಡಲಾಗಬಹುದು. ನಿಮ್ಮನ್ನು ಚೆನ್ನಾಗಿ ರಕ್ಷಿಸಿಕೊಳ್ಳಲು:

  • ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಯಾವೆಲ್ಲಾ ಮಾಹಿತಿಗಳಿವೆ ಮತ್ತು ಒಂದು ವೇಳೆ ನಿಮ್ಮನ್ನು ಬಂಧಿಸಿದಲ್ಲಿ ಹಾಗೂ ನಿಮ್ಮ ಸಾಧನಗಳನ್ನು ವಶಪಡಿಸಿಕೊಂಡು ತಪಾಸಣೆ ನಡೆಸಿದಲ್ಲಿ ಅದು ನಿಮ್ಮನ್ನು ಮತ್ತು ಬೇರೆಯವರನ್ನು ಹೇಗೆ ಅಪಾಯಕ್ಕೆ ಸಿಲುಕಿಸಬಹುದು ಎಂಬುದನ್ನು ತಿಳಿದುಕೊಂಡಿರಿ.
  • ವರದಿ ಮಾಡಲು ಹೋಗುವ ಮೊದಲು ನಿಮ್ಮ ಫೋನನ್ನು ಒಂದ ಹಾರ್ಡ್‌ಡ್ರೈವ್‌ಗೆ ಬ್ಯಾಕಪ್ ಮಾಡಿಕೊಂಡಿರಿ ಅಥವಾ ನೀವು ಕೊಂಡೊಯ್ಯುವ ಯಾವುದೇ ಸೂಕ್ಷ್ಮ  ಮಾಹಿತಿ, ಕುಟುಂದ ಫೊಟೋಗಳೇ ಮುಂತಾದ ಇತರ ಮಾಹಿತಿಗಳಿಗೆ ಅಕ್ಸೆಸನ್ನು ತೆಗೆದುಹಾಕಿ ಇಲ್ಲವೇ ಮಿತಗೊಳಿಸಿ.
  • ವರದಿ ಮಾಡುವಾಗ ನೀವು ಉಪಯೋಗಿಸದ ಯಾವುದೇ ಅಕೌಂಟುಗಳು ಅಥವಾ ಅಪ್ಲಿಕೇಶನ್‌ಗಳಿಂದ ಲಾಗ್‌ಔಟ್ ಮಾಡಿರಿ ಅಥವಾ ಅವುಗಳನ್ನು ನಿಮ್ಮ ಫೋನಿನಿಂದ ತೆಗೆದುಹಾಕಿ. ಬ್ರೌಸರ್‌ಗಳಿಂದ ಲಾಗ್‌ಔಟ್ ಆಗಿರಿ ಮತ್ತು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಅಳಿಸಿಹಾಕಿ. ನಿಮ್ಮ ಫೋನನ್ನು ಕಿತ್ತುಕೊಂಡು ತಪಾಸಣೆ ನಡೆಸಿದ ಸಂದರ್ಭದಲ್ಲಿ ಅದು ನಿಮ್ಮ ಅಕೌಂಟ್‌ಗಳನ್ನು ಪರಿಶೀಲಿಸುವುದರಿಂದ ಚೆನ್ನಾಗಿ ರಕ್ಷಿಸುತ್ತದೆ.
  • ನಿಮ್ಮ ಎಲ್ಲಾ ಸಾಧನಗಳನ್ನು ಪಾಸ್‌ವರ್ಡ್ ಮೂಲಕ ರಕ್ಷಿಸಿಕೊಳ್ಳಿ ಮತ್ತು ವರದಿ ಮಾಡಲು ಹೋಗುವ ಮೊದಲು ನಿಮ್ಮ ಸಾಧನಗಳನ್ನು ರಿಮೋಟ್ ವೈಪ್ ಮಾಡಲು ಸಾಧ್ಯವಾಗುವಂತೆ ಹೊಂದಿಸಿಕೊಳ್ಳಿ. ರಿಮೋಟ್ ವೈಪ್ ಇಂಟರ್ನೆಟ್ ಸಂಪರ್ಕ ಇದ್ದರಷ್ಟೇ ಸಾಧ್ಯವಾಗುತ್ತದೆ. ನಿಮ್ಮ ಫೋನನ್ನು ಅನ್‌ಲಾಕ್ ಮಾಡಲು ಬೆರಳಚ್ಚು ಮುಂತಾದ ಬಯೋಮೆಟ್ರಿಕ್ಸ್ ಬಳಸಬೇಡಿ. ಯಾಕೆಂದರೆ, ನಿಮ್ಮನ್ನು ಒಂದುವೇಳೆ ವಶಕ್ಕೆ ತೆಗೆದುಕೊಂಡರೆ, ನಿಮ್ಮ ಸಾಧನಗಳನ್ನು ತೆರೆಯುವುದು ಸುಲಭವಾಗುತ್ತದೆ. 
  • ನಿಮ್ಮ ಜೊತೆಗೆ ಆದಷ್ಟು ಕಡಿಮೆ ಸಾಧನಗಳನ್ನು ತೆಗೆದುಕೊಂಡು ಹೋಗಿ. ನಿಮ್ಮ ಬಳಿ ಬೇರೆ ಸಾಧನ ಇದ್ದರೆ, ನೀವು ವೈಯಕ್ತಿಕವಾಗಿ ಆಥವಾ ಕೆಲಸಕ್ಕೆ ಬಳಸುವ ಸಾಧನಗಳನ್ನು ಹಿಂದೆ ಬಿಟ್ಟು ಅದನ್ನು ತೆಗೆದುಕೊಂಡು ಹೋಗಿ.
  • ನಿಮ್ಮ ಆಂಡ್ರಾಯ್ಡ್ ಫೋನಿನ ಎನ್‌ಕ್ರಿಪ್ಷನನ್ನು ಆನ್ ಮಾಡುವುದನ್ನು ಪರಿಗಣಿಸಿ. ಹೊಸ ಐಫೋನ್‌ಗಳು ಸಾಮಾನ್ಯ ಎಂಬಂತೆ ಎನ್‌ಕ್ರಿಪ್ಷನನ್ನು ಹೊಂದಿವೆ. ದಯವಿಟ್ಟು ಎನ್‌ಕ್ರಿಪ್ಷನ್ ಬಳಕೆ ಕುರಿತ ಕಾನೂನುಗಳನ್ನು ನೋಡಿಕೊಳ್ಳಿ.
  • ಸಾಧ್ಯವಿರುವಾಗಲೆಲ್ಲಾ ಸಹೋದ್ಯೋಗಿಗಳು ಅಥವಾ ಮೂಲಗಳನ್ನು ಸಂಪರ್ಕಿಸಲು ಸಿಗ್ನಲ್‌ನಂತಹ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಇದುವ ಮೆಸೇಜಿಂಗ್ ಸೇವೆಗಳನ್ನು ಬಳಸಿ. ಸಂದೇಶಗಳು ನಿರ್ದಿಷ್ಟ ಅವಧಿಯ ನಂತರ ತನ್ನಿಂದ ತಾನೇ ಡಿಲೀಟ್ ಆಗುವಂತೆ ಸೆಟ್ ಮಾಡಿಡಿ.
  • ಸೈಟ್‌ಗಳನ್ನು ಬ್ಲಾಕ್ ಮಾಡಲಾದರೆ ಅವುಗಳನ್ನು ನೋಡಲು ನೆರವಾಗುವಂತೆ ಒಂದು ವಿಪಿಎನ್ ಅಳವಡಿಸಿಕೊಳ್ಳಿ. ವಿಪಿಎನ್ ಬಳಕೆಯ ಕಾನೂನುಗಳನ್ನು ಅಧ್ಯಯನ ಮಾಡಿ ಮತ್ತು ಹಿಂದೆ ಭಾಗಶಃ ಇಂಟರ್ನೆಟ್ ಶಟ್‌ಡೌನ್ ಆದ ಸಮಯದ ವೇಳೆ ನಿರ್ದಿಷ್ಟ ವಿಪಿಎನ್‌ ಸೇವೆ ಕೆಲಸ ಮಾಡಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. 
  • ಸಂಪೂರ್ಣ ಇಂಟರ್ನೆಟ್ ಶಟ್‌ಡೌನ್ ಆದ ಸಂದರ್ಭದಲ್ಲಿ ನೀವು ಯಾವಾಗ ಮತ್ತು ಹೇಗೆ ಬೇರೆಯವರನ್ನು ಸಂಪರ್ಕಿಸುತ್ತೀರಿ ಎಂಬ ಬಗ್ಗೆ ಒಂದು ಪೂರ್ವಯೋಜನೆ ಮಾಡಿಟ್ಟುಕೊಂಡಿರಿ.
  • ಕಚೇರಿಯ ಮೇಲೆ ದಾಳಿ ನಡೆದ ಸಂದರ್ಭಕ್ಕೆ ಮತ್ತು ಸುದ್ದಿಮನೆಯ ಕಂಪ್ಯೂಟರ್‌ಗಳಲ್ಲಿ ಇರುವ ದತ್ತಾಂಶಗಳನ್ನು ಸುರಕ್ಷಿತವಾಗಿರಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಒಂದು ಯೋಜನೆಯನ್ನು ಮೊದಲೇ ಸಿದ್ಧಪಡಿಸಿಕೊಂಡಿರಿ.
  • ಸುದ್ದಿಮನೆಯ ದತ್ತಾಂಶಗಳ ಒಂದಕ್ಕಿಂತ ಹೆಚ್ಚು ಪ್ರತಿ ಇಟ್ಟುಕೊಂಡಿರಿ. ಈ ಪ್ರತಿಗಳಲ್ಲಿ ಒಂದನ್ನು ಕಚೇರಿಯ ಹೊರಗಡೆ, ಸುದ್ದಿಮನೆಯೊಂದಿಗೆ ಸಂಪರ್ಕ ಹೊಂದಿರದ ಸ್ಥಳದಲ್ಲಿ ಶೇಖರಿಸಿಟ್ಟುಕೊಂಡಿದ್ದರೆ ಒಳ್ಳೆಯದು.
  •  ನೀವು ಬ್ಯಾಕಪ್ ಆಗಿ ಇಟ್ಟುಕೊಂಡಿರು ಯಾವುದೇ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡಿಟ್ಟುಕೊಳ್ಳುವುದು ಉತ್ತಮ. ನಿಮ್ಮ ಬಾಹ್ಯ ಹಾರ್ಡ್‌ಡ್ರೈವ್ ಅಥವಾ ಫ್ಲ್ಯಾಶ್‌ಡ್ರೈವನ್ನು ಎನ್‌ಕ್ರಿಪ್ಟ್ ಮಾಡುವುದರ ಮೂಲಕ ಇದನ್ನು ಮಾಡಬಹುದು. ಎನ್‌ಕ್ರಿಪ್ಷನ್ ಕುರಿತ ಯಾವುದೇ ಕಾನೂನು ವಿಷಯಗಳ ಕುರಿತು ನಿಮಗೆ ಆರಿವಿರುವಂತೆ ನೋಡಿಕೊಳ್ಳಿ.

ಡಿಜಿಟಲ್ ಸುರಕ್ಷೆ: ಸ್ಪೈವೇರ್ ಮತ್ತು ಡಿಜಿಟಲ್ ಕಣ್ಗಾವಲು

ಸಿಟಿಜನ್ ಲ್ಯಾಬ್ ಮತ್ತು ಸಿಪಿಜೆ ಸಂದರ್ಶನಗಳ ಪ್ರಕಾರ  ಪೆಗಾಸಸ್‌ನಂತಹ ಸಂಯೋಜಿತ ಸ್ಪೈವೇರ್ ಅಭಿಮಾನಿಗಳನ್ನು ಭಾರತದ ಪತ್ರಕರ್ತರ ವಿರುದ್ಧ ಬಳಸಲಾಗಿದೆ. ಒಮ್ಮೆ ಅದನ್ನು ನಿಮ್ಮ ಫೋನಿನೊಳಗೆ ಇನ್‌ಸ್ಟಾಲ್ ಮಾಡಲಾದರೆ ಈ ಅತ್ಯಾಧುನಿಕ ಸ್ಪೈವೇರ್- ಎನ್‌ಕ್ರಿಪ್ಟ್ ಮಾಡಲಾದ ಸಂದೇಶಗಳೂ ಸೇರಿದಂತೆ ಎಲ್ಲಾ ಚಟುವಟಿಕೆಗಳ ಕಣ್ಗಾವಲು ಮಾಡಬಲ್ಲದು. ಕಾನೂನಿನ ಅನುಷ್ಟಾನದಲ್ಲಿ ನೆರವಾಗಲು ತಾನು ಈ ಕಣ್ಗಾವಲು ಸಾಧನವನ್ನು ಸರಕಾರಗಳಿಗೆ ಮಾತ್ರವೇ ಮಾರುತ್ತಿರುವುದಾಗಿ ಇಸ್ರೇಲ್ ಮೂಲದ ಎನ್‌ಎಸ್‌ಓ ಗುಂಪು ಹೇಳುತ್ತದೆ. ಒಪ್ಪಂದ ಮುರಿದು ತನ್ನ ಉತ್ಪನ್ನವನ್ನು ದುರುಪಯೋಗ ಮಾಡಿದ ವರದಿಗಳನ್ನು ತಾನು ತನಿಖೆ ಮಾಡುವುದಾಗಿ ಅದು ಸಿಪಿಜೆಗೆ ಮತ್ತೆಮತ್ತೆ ಹೇಳಿದೆ.

ನಿಮ್ಮ ಸಾಧನಗಳನ್ನು ಚೆನ್ನಾಗಿ ರಕ್ಷಿಸಲು ಈ ಕ್ರಮಗಳನ್ನು ಕೈಗೊಳ್ಳಿ:

  • ಐಒಎಸ್ 16 ಅಥವಾ 17ನ್ನು ಬಳಸುವ ಆಪಲ್ ಸಾಧನಗಳು ತಮ್ಮೊಳಗೆಯೇ ಲಾಕ್‌ಡೌನ್ ಮೋಡ್ ಎಂಬ ಸ್ಪೈವೇರ್ ವಿರುದ್ಧ ರಕ್ಷಣೆಯನ್ನು ಹೊಂದಿವೆ. ಅದನ್ನು ಏಕ್ಟಿವೇಟ್ ಮಾಡಲು ನೀವು ನಿಮ್ಮ ಡಿವೈಸನ್ನು ರೀಸ್ಟಾರ್ಟ್ ಮಾಡಬೇಕಾಗುತ್ತದೆ. 
  • ಆಂಡ್ರಾಯ್ಡ್ ಫೋನ್‌ಗಳ ಒಳೆಗೆ ಬಿಲ್ಟಿನ್ ಸ್ಪೈವೇರ್ ರಕ್ಷಣೆ ಇರುವುದಿಲ್ಲ. ಆದುದರಿಂದ ಸ್ಪೈವೇರ್ ದಾಳಿಗಳ ಅಪಾಯ ಎದುರಿಸುತ್ತಿರುವ ಪತ್ರಕರ್ತರು ತಮ್ಮ ಸಾಧನದಲ್ಲಿ ನಿಯಮಿತವಾಗಿ ಫ್ಯಾಕ್ಟರಿ ರೀಸೆಟ್ ಮಾಡಬೇಕು. ಇದು ಸ್ಪೈವರನ್ನು ತೆಗೆದುಹಾಕುವುದು ಎಂಬ ಖಾತರಿಯಿಲ್ಲ. ಆದರೆ, ಡಿವೈಸನ್ನು ರೀಬೂಟ್ ಮಾಡುವುದರಿಂದ ಪೆಗಾಸಸ್ ಸ್ಪೈವೇರ್ ಮಾಯವಾಗುವಂತೆ ಕಾಣುತ್ತದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಜುಲೈ 2021ರಲ್ಲಿ ಗುರುತಿಸಿತ್ತು.

ನಿಮ್ಮ ಸಾಧನದಲ್ಲಿ ಸ್ಪೈವೇರ್ ಇದೆಯೆಂದು ನಿಮಗೆ ಸಂಶಯವಿದ್ದಲ್ಲಿ:

  • ಆ ಸಾಧನದ ಬಳಕೆಯನ್ನು ತಕ್ಷಣವೇ ನಿಲ್ಲಿಸಿ ಮೈಕ್ರೋಫೋನ್ ಮತ್ತು ಕ್ಯಾಮರಾ ನಿಮ್ಮ ವೈಯಕ್ತಿಕ ಚಟುವಟಿಕೆಗಳನ್ನು ಅತ್ಯಂತ ಕಡಿಮೆ ಎತ್ತಿಕೊಳ್ಳಬಹುದಾದ ಸ್ಥಳದಲ್ಲಿ, ನೀವು ಅತ್ಯಂತ ಹೆಚ್ಚು ಸಮಯ ಕಳೆಯುವ ಕೆಲಸದ ಸ್ಥಳ ಅಥವಾ ಬೆಡ್‌ರೂಂನಂತಹ ಸ್ಥಳಗಳಿಂದ ದೂರ ಇಡಿ. 
  • ಎಲ್ಲಾ ಅಕೌಂಟ್‌ಗಳಿಂದ ಲಾಗ್‌ಔಟ್ ಮಾಡಿ ಮತ್ತು ಅವುಗಳನ್ನು ಸಾಧನದಿಂದ ಅನ್‌ಲಿಂಕ್ ಮಾಡಿ.
  • ಬೇರೊಂದು ಸಾಧನದಿಂದ ನಿಮ್ಮ ಎಲ್ಲಾ ಪಾಸ್‌ವರ್ಡ್‌ಗಳನ್ನು ಬದಲಿಸಿ.

ನಮ್ಮ ಸಲಹೆ ಸೂಚನೆಯಲ್ಲಿ (advisory) ಪೆಗಾಸಸ್ ಸ್ಪೈವೇರ್ ಬಗ್ಗೆ ಇನ್ನಷ್ಟನ್ನು ಓದಿ.

ಡಿಜಿಟಲ್ ಸುರಕ್ಷೆ: ಇಂಟರ್ನೆಟ್ ಶಟ್‌ಡೌನ್‌ಗಳು

ಚುನಾವಣೆಯ ಸಂದರ್ಭದಲ್ಲಿ ಸಂಪೂರ್ಣ ಅಥವಾ ಭಾಗಶಃ ಇಂಟರ್ನೆಟ್ ಶಟ್‌ಡೌನ್‌ಗಳು ಹೆಚ್ಚುವ ನಿರೀಕ್ಷೆಯಿದೆ. ತಮ್ಮ ಕೆಲಸ ಮಾಡುವ ಪರ್ತಕರ್ತರ ಮೇಲೆ ಇದರಿಂದ ಗಂಭೀರ ಪರಿಣಾಮಗಳು ಆಗಬಹುದು. ಇಂಟರ್ನೆಟ್ ಸಂಪರ್ಕ ಇಲ್ಲದಿರುವುದು ಅಥವಾ ಸೀಮಿತವಾಗಿ ಇರುವುದರ ಆರ್ಥ- ಪತ್ರಕರ್ತರಿಗೆ ತಮ್ಮ ಸುದ್ದಿಮೂಲಗಳನ್ನು ಸಂಪರ್ಕಿಸುವುದು, ದತ್ತಾಂಶಗಳ ಸತ್ಯಾಸತ್ಯತೆಗಳನ್ನು ಚೆಕ್ ಮಾಡುವುದು ಅಥವಾ ತಮ್ಮ ವರದಿಗಳನ್ನು ಸಲ್ಲಿಸುವುದು ಕಷ್ಟವಾಗುತ್ತದೆ ಎಂದು. ಭಾರತದಲ್ಲಿ ಸಂಪೂರ್ಣ ಅಥವಾ ಭಾಗಶಃ ಇಂಟರ್ನೆಟ್ ಶಟ್‌ಡೌನ್‌ಗಳು ಮತ್ತು ಅದರಿಂದ ಮಾಧ್ಯಮಗಳ ಮೇಲಾಗುವ ಪರಿಣಾಮಗಳನ್ನು ಸಿಪಿಜೆ ದಾಖಲಿಸಿದೆ.

ಶಟ್‌ಡೌನ್ ಪರಿಣಾಮಗಳನ್ನು ಸೀಮಿತಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳಿ:

  • ಸಂಪೂರ್ಣ ಶಟ್‌ಡೌನ್ ಸಂದರ್ಭದಲ್ಲಿ ಏನು ಮಾಡಬೇಕೆಂದು ಯೋಜಿಸುವಂತೆ ನಿಮ್ಮ ಸುದ್ದಿಮನೆ ಮತ್ತು ಸಹೋದ್ಯೋಗಿಗಳ ಜೊತೆ ಮಾತನಾಡಿ. ಒಬ್ಬ ವ್ಯಕ್ತಿಯಲ್ಲಿ ಯಾವಾಗ ಮತ್ತು ಎಲ್ಲಿ ಮಾತನಾಡಬೇಕು, ನೀವು ವರದಿಯನ್ನು  ಹೇಗೆ ದಾಖಲಿಸುತ್ತೀರಿ, ಇಂಟರ್ನೆಟ್ ಬಳಸದೆ ಮಾಹಿತಿಗಳನ್ನು ಹೇಗೆ ನಿಮ್ಮ ಸಂಪಾದಕರಿಗೆ ರವಾನಿಸುತ್ತೀರಿ  ಎಂಬುದಕ್ಕೆ ಮೊದಲೇ ಯೋಜನೆಯೊಂದನ್ನು ರೂಪಿಸಿ. ಲ್ಯಾಂಡ್ ಲೈನ್ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಿ. ಆದರೆ, ಲ್ಯಾಂಡ್ ಲೈನ್ ಸಂಪರ್ಕಗಳು ಸುರಕ್ಷಿತವಲ್ಲ ಎಂಬುದು ನಿಮಗೆ ತಿಳಿದಿರಲಿ ಮತ್ತು ಸೂಕ್ಷ್ಮ ವಿಷಯಗಳ ಮಾತುಕತೆಗಳಿಗೆ ಲ್ಯಾಂಡ್ ಲೈನ್ ಬಳಸಬಾರದು. ಶಟ್‌ಡೌನ್‌ನಿಂದ ಬಾಧಿತವಾಗಬಹುದಾದ ಪ್ರದೇಶಗಳಲ್ಲಿ ವಾಸವಾಗಿರುವ ಅಥವಾ ಕೆಲಸ ಮಾಡುವ ನಿಮ್ಮ ಸಹೋದ್ಯೋಗಿಗಳಿಗೆ ನೀವು ಹೇಗೆ ಬೆಂಬಲ ನೀಡಬಹುದು ಎಂದು ಯೋಜಿಸಿ.
  • ನಿಮಗೆ ಮುಂದೆ ಬೇಕಾಗಬಹುದಾದ ಯಾವುದೇ ದಾಖಲೆ ಅಥವಾ ವಿಷಯಗಳನ್ನು ಶಟ್‌ಡೌನ್‌ಗೆ ಮೊದಲೇ  ಆನ್‌ಲೈನ್ ಸೈಟ್‌ಗಳಿಂದ ತೆಗೆದು ಪ್ರಿಂಟ್ ಔಟ್ ಇಟ್ಟುಕೊಂಡಿರಿ.
  • ಸಿಬ್ಬಂದಿಗೆ ಯುಎಸ್ಬಿ ಸಾಧನಗಳು ಅಥವಾ ಸಿಡಿಗಳನ್ನು ಒದಗಿಸಿ
  • ಭಾಗಶಃ ಶಟ್‌ಡೌನ್ ವೇಳೆ ಬ್ಲಾಕ್ ಆದ ಸೈಟ್‌ಗಳನ್ನು ನೋಡಲು ನೆರವಾಗುವಂತೇ ವಿಪಿಎನ್ ಸೇವೆಗಳನ್ನು ಡೌನ್‌ಲೋಡ್ ಮಾಡಿ ಸೆಟ್‌ ಅಪ್ ಮಾಡಿ. ಇಂಟರ್ನೆಟ್ ಸೇವೆ ಒದಗಿಸುವವರು ಆಗಾಗ ವಿಪಿಎನ್‌ಗಳನ್ನು ಬ್ಲಾಕ್ ಮಾಡುತ್ತಾರೆ. ಆದುದರಿಂದ ಹಲವು ವಿಪಿಎನ್‌ಗಳ ಆಯ್ಕೆ ಇರುವುದು ಒಳ್ಳೆಯದು. ಸಂಪೂರ್ಣ ಇಂಟರ್ನೆಟ್ ಶಟ್‌ಡೌನ್ ವೇಳೆ ನಿಮಗೆ ಯಾವುದೇ ವಿಪಿಎನ್ ನೆರವಾಗಲಾರದು.
  • ಬೇರೆಯವರನ್ನು ಸಂಪರ್ಕಿಸಲು ಒಂದಕ್ಕಿಂತ ಹೆಚ್ಚು ವಿಧಾನ ನಿಮ್ಮ ಬಳಿ ಇರಲಿ. ಹಲವಾರು ಸಂಪರ್ಕ ಅಪ್ಲಿಕೇಶನ್‌ಗಳು ಇದ್ದರೆ, ಒಂದು ಬ್ಲಾಕ್ ಆದಾಗ ನೀವು ಇನ್ನೊಂದನ್ನು ಬಳಸಲು ಅನುಕೂಲವಾಗುತ್ತದೆ. ಬೇರೆಬೇರೆ ಅಪ್ಲಿಕೇಶನ್‌ಗಳಲ್ಲಿ ಇರುವ ಭದ್ರತಾ ಅಪಾಯಗಳನ್ನೂ ತಿಳಿದುಕೊಂಡಿರಿ. ಉದಾಹರಣೆಗೆ ಕೆಲವು ಸೇವೆಗಳಲ್ಲಿ ಎನ್‌ಕ್ರಿಪ್ಷನ್ ಡಿಫಾಲ್ಟ್ ಆಗಿ ಇರುವುದಿಲ್ಲ. ನೀವದನ್ನು ಆನ್ ಮಾಡಬೇಕಾಗುತ್ತದೆ. ಇಂಟರ್ನೆಟ್ ಶಟ್‌ಡೌನ್ ವೇಳೆ ನೀವು ಎಸ್‌ಎಂಎಸ್‌ನಂತಹ ಅಸುರಕ್ಷಿತ ವಿಧಾನಗಳ ಮೂಲಕ ಸಂಪರ್ಕ ಸಾಧಿಸಬೇಕಾಗಬಹುದು. ಆದುದರಿಂದ, ನೀವು ಹೇಗೆ ಸೂಕ್ಷ್ಮ  ಮಾಹಿತಿಗಳನ್ನು ಹಂಚಿಕೊಳ್ಳುತ್ತೀರಿ ಎಂಬ ಬಗ್ಗೆ ಎಚ್ಚರಿಕೆಯಿಂದಿರಿ.
  • ಬ್ಲೂಟೂತ್, ವೈ-ಫೈ ಡೈರೆಕ್ಟ್ ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಶನ್ (ಎನ್ಎಫ್‌ಸಿ) ಬಳಸಿ ಹೇಗೆ ದತ್ತಾಂಶ ವಿನಿಮಯ ಮಾಡಿಕೊಳ್ಳಬಹುದು ಎಂಬುದನ್ನು ಕಲಿತುಕೊಳ್ಳಿ. ಇವುಗಳ ಮೂಲಕ ನೀವು ನಿಮ್ಮ ಸಾಧನವನ್ನು ಇನ್ನೊಂದ ಸಾಧನಕ್ಕೆ ಜೊತೆ ಮಾಡಿಕೊಳ್ಳಬಹುದು ಮತ್ತು ಅದಕ್ಕೆ ಇಂಟರ್ನೆಟ್ ಸಂಪರ್ಕದ ಅಗತ್ಯ ಇರುವುದಿಲ್ಲ. ಅವುಗಳು ಸಾಮಾನ್ಯವಾಗಿ ನಿಮ್ಮ ಫೋನಿನ ಸೆಟ್ಟಿಂಗ್ ವಿಭಾಗದಲ್ಲಿ ಇರುತ್ತವೆ. ಶಟ್‌ಡೌನಿಗೆ ಮುನ್ನವೇ ಅವುಗಳ ಬಳಕೆಯನ್ನು ಕಲಿತುಕೊಳ್ಳಿ ಮತ್ತು ಫೈಲುಗಳನ್ನು ಶೇರ್ ಮಾಡುವಾಗಿನ ಅವುಗಳ ಮಿತಿಗಳನ್ನೂ ಅರ್ಥಮಾಡಿಕೊಳ್ಳಿ.
  • ನಿಮಗೆ ನೈಜ ಸಮಯದಲ್ಲಿ ವರದಿ ಸಲ್ಲಿಸಲು ಕಷ್ಟವಾದರೂ, ಏನು ನಡೆಯುತ್ತಿದೆ ಎಂದು ದಾಖಲಿಸಲು ನಿಮಗೆ ಸಾಧ್ಯವಿದೆ. ಯುಎಸ್‌ಬಿಗಳು ಅಥವಾ ಸಿಡಿಗಳನ್ನು ಬಳಸಿ-ಸಾಧ್ಯವಾದರೆ ಎನ್‌ಕ್ರಿಪ್ಟ್ ಮಾಡಿ-  ಸಹೋದ್ಯೋಗಿಗಳು ಮತ್ತು ಸಂಪಾದಕರಿಗೆ ತಲಪಿಸಿ. ಈ ಸಾಧನಗಳನ್ನು ಎನ್‌ಕ್ರಿಪ್ಟ್ ಮಾಡದಿದ್ದರೆ, ಒಂದು ವೇಳೆ ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳಲಾದರೆ ಈ ಮಾಹಿತಿಗಳನ್ನು ಅಧಿಕಾರಿಗಳು ನೋಡಬಹುದು ಎಂಬುದು ನಿಮಗೆ ಗೊತ್ತಿರಲಿ. 

ಇಂಟರ್ನೆಟ್ ಶಟ್‌ಡೌನ್ ಕುರಿತು ಹೆಚ್ಚಿನ ಮಾಹಿತಿಗಾಗಿ ಸಿಪಿಜೆಯ ಗೈಡ್ ನೋಡಿ.

ಆಗಸ್ಟ್ 6, 2023ರಂದು ಬಂಡಿಪೋರದಲ್ಲಿ ಭಾರತೀಯ ಸೇನೆಯ ಸೈನಿಕ ವಸೀಂ ಆಹ್ಮದ್ ಅವರ ಅಂತ್ಯಕ್ರಿಯೆಯ ವೇಳೆ ಒಬ್ಬ ಗ್ರಾಮಸ್ಥ ಭಾರತೀಯ ಸೈನಿಕರ ಪಕ್ಕದಲ್ಲಿ ನಿಂತು ಮೊಬೈಲ್ ಫೋನಿನಲ್ಲಿ ಫೊಟೋ ತೆಗೆಯುತ್ತಿರುವುದು. ತೌಸೀಫ್ ಮುಸ್ತಫಾ/ಎಎಫ್‌ಪಿ

ಡಿಜಿಟಲ್ ಸುರಕ್ಷೆ: ಆನ್‌ಲೈನ್ ಕಿರುಕುಳ ಮತ್ತು ಗುರಿನಿಗದಿತ ಆನ್‌ಲೈನ್ ಅಭಿಯಾನಗಳು

ಗುರಿನಿಗದಿತ ಆನ್‌ಲೈನ್ ಅಭಿಯಾನಗಳೂ ಸೇರಿದಂತೆ ಆನ್‌ಲೈನ್ ಕಿರುಕುಳಗಳು ಚುನಾವಣೆಗಳ ಸಂದರ್ಭದಲ್ಲಿ ಹೆಚ್ಚಾಗಬಹುದು. ಮಾಧ್ಯಮಗಳಲ್ಲಿ ಕೆಲಸ ಮಾಡುವವರನ್ನು ಹೆಚ್ಚಿನ ಸಮಯಗಳಲ್ಲಿ ಆನ್‌ಲೈನ್ ದಾಳಿಕೋರರು ಪತ್ರಕರ್ತರಿಗೆ ಮತ್ತು ಅವರ ಕೆಲಸಕ್ಕೆ ಅಪಖ್ಯಾತಿ ತರುವ ಸಲುವಾಗಿ ಅವರನ್ನು ಗುರಿ ಮಾಡುತ್ತಾರೆ. ಇದು ಹೆಚ್ಚಾಗಿ ಸಮನ್ವಯಿತ ಕಿರುಕುಳ ಮತ್ತು ಅಪಪ್ರಚಾರ ಅಭಿಯಾನಗಳನ್ನು ಒಳಗೊಂಡಿದ್ದು, ಅವರು ಅನಿವಾರ್ಯವಾಗಿ ಆಫ್‌ಲೈನ್ ಇರುವಂತೆ ಮಾಡಿ ಪತ್ರಕರ್ತರು ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ಮಾಡಲಾಗುತ್ತದೆ. ವಿಶೇಷವಾಗಿ ಮಹಿಳಾ ಪತ್ರಕರ್ತರನ್ನು ಗುರಿ ಮಾಡಲಾಗುತ್ತದೆ ಮತ್ತು ಅವರು ಆನ್‌ಲೈನಲ್ಲಿ ಸ್ತ್ರೀದ್ವೇಷಿ, ಹಿಂಸಾತ್ಮಕ ಲೈಂಗಿಕ ಕಿರುಕುಳಕ್ಕೆ ತುತ್ತಾಗುತ್ತಾರೆ. ಸಿಪಿಜೆ- ಭಾರತದಲ್ಲಿ ಮಹಿಳಾ ಪತ್ರಕರ್ತರನ್ನು ಈ ರೀತಿಯ ಕಿರುಕುಳಕ್ಕೆ ಗುರಿಪಡಿಸಿದಂತಹ ಹಲವಾರು ಪ್ರಕರಣಗಳ ದಾಖಲೀಕರಣ ಮಾಡಿದೆ. ಆನ್‌ಲೈನ್ ದಾಳಿಗಳ ವಿರುದ್ಧ ರಕ್ಷಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ತಮ್ಮನ್ನು ಮತ್ತು ತಮ್ಮ ಖಾತೆಗಳನ್ನು ಹೆಚ್ಚಾಗಿ ರಕ್ಷಿಸಿಕೊಳ್ಳಲು ಕೆಲವು ಕ್ರಮಗಳಿವೆ.

ನಿಮ್ಮನ್ನು ಹೆಚ್ಚು ರಕ್ಷಿಸಿಕೊಳ್ಳಲು:

  • ನೀವು ಮಾಡಲಿರುವ ವರದಿಗಳ ರೀತಿಯು ಆನ್‌ಲೈನ್ ಕಿರುಕುಳಕ್ಕೆ ಕಾರಣವಾಗಬಹುದೆ ಎಂದು ಅಧ್ಯಯನ ಮಾಡಿ.
  • ಆನ್‌ಲೈನ್ ಕಿರುಕುಳಕೋರರು ನಿಮ್ಮ ಅಕೌಂಟ್‌ಗಳನ್ನು ಹ್ಯಾಕ್ ಮಾಡಬಹುದು. ಈ ಗೈಡಿನ ಆರಂಭದಲ್ಲಿ ನೀಡಲಾದ ಉತ್ತಮ ಅಭ್ಯಾಸಗಳನ್ನು ಬಳಸುವುದರ ಮೂಲಕ ನಿಮ್ಮ ಆನ್‌ಲೈನ್ ಅಕೌಂಟ್‌ಗಳನ್ನು ರಕ್ಷಿಸಿಕೊಳ್ಳಿ. 
  • ದಾಳಿಕೋರರು ಆನ್‌ಲೈನ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳಿಗಾಗಿ ಹುಡುಕುತ್ತಾರೆ. ಈ ಮಾಹಿತಿಗಳನ್ನು ಅವರು ನಿಮಗೆ ಕಿರುಕುಳ ನೀಡಲು, ಭಯಪಡಿಸಲು ಮತ್ತು ಬೆದರಿಕೆ ಹಾಕಲು ಬಳಸುವ ಸಾಧ್ಯತೆ ಇದೆ. ನಿಮಗೆ ಹಾನಿ ಮಾಡಲು ನಿಮ್ಮ ಮನೆಯ ವಿಳಾಸ ಇತ್ಯಾದಿ ವೈಯಕ್ತಿಕ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಹಾಕುವುದೂ ಸೇರಿರಬಹುದು. ನೀವೇ ನೋಡಿಕೊಂಡು ನಿಮ್ಮನ್ನು ಅಪಾಯಕ್ಕೆ ಒಡ್ಡಬಲ್ಲ ಮಾಹಿತಿಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಿ.
  • ಪ್ರತಿಯೊಂದು ಅಕೌಂಟಿಗೆ ನಿಮ್ಮ ಖಾಸಗಿತನದ ಸೆಟ್ಟಿಂಗ್ (privacy settings) ಪರಿಶೀಲಿಸಿ, ಸಾಧ್ಯವಾದಲ್ಲೆಲ್ಲಾ ವಿಳಾಸ , ಫೋನ್ ನಂಬರ್, ಹುಟ್ಟಿದ ದಿನಾಂಕ ಇತ್ಯಾದಿ ವೈಯಕ್ತಿಕ ಮಾಹಿತಿಗಳನ್ನು ತೆಗೆದುಹಾಕಿ. ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಯಾರೆಲ್ಲಾ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೋಡಲು ಸಾಧ್ಯವಿದೆ ಎಂಬುದನ್ನು ಪರಿಶೀಲಿಸಿ ನಿಮ್ಮ ಪ್ರೈವೆಸಿ ಸೆಟ್ಟಿಂಗನ್ನು ಬಿಗಿಗೊಳಿಸಿ.
  • ನಿಮ್ಮ ಅಕೌಂಟುಗಳನ್ನ ನೋಡಿ, ನಿಮ್ಮನ್ನು ಚಾರಿತ್ರ್ಯ ಹನನ ಮಾಡಲು ದುರುಪಯೋಗಪಡಿಸಲು ಸಾಧ್ಯವಿರಬಹುದಾದಂತಹ ಫೊಟೋಗಳು, ಚಿತ್ರಗಳು ಇತ್ಯಾದಿಗಳನ್ನು ತೆಗೆದುಹಾಕಿ ಇಲ್ಲವೇ ಮುಚ್ಚಿಡಿ (ಹೈಡ್ ಮಾಡಿ). ಇದು ಟ್ರೋಲ್‌ಗಳು ಬಳಸುವ ಸಾಮಾನ್ಯ ತಂತ್ರ.
  • ಸಾಧ್ಯವಾದಲ್ಲಿ ಆನ್‌ಲೈನ್ ಕಿರುಕುಳದ ಬಗ್ಗೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜೊತೆಯಲ್ಲಿ ಮಾತನಾಡಿ. ಸಾಮಾನ್ಯವಾಗಿ ಕಿರುಕುಳಕೋರರು ಪತ್ರಕರ್ತರ ಸಂಬಂಧಿಕರು ಮತ್ತು ಸಾಮಾಜಿಕ ವರ್ತುಲದಲ್ಲಿ ಇರುವವರ ಸಾಮಾಜಿಕ ಮಾಧ್ಯಮ ಅಕೌಂಟುಗಳಿಂದ ಪತ್ರಕರ್ತರ ಕುರಿತು ಮಾಹಿತಿ ಪಡೆಯುತ್ತಾರೆ. ಅವರ ಸೈಟ್‌ಗಳಿಂದ ನಿಮ್ಮ ಫೊಟೋಗಳನ್ನು ತೆಗೆದುಹಾಕುವಂತೆ ಇಲ್ಲವೇ ಅವರ ಅಕೌಂಟ್‌ಗಳನ್ನು ಲಾಕ್ ಮಾಡುವಂತೆ ಕೇಳಿಕೊಳ್ಳಿ.
  • ಈ ರೀತಿ ನಿಮ್ಮನ್ನು ಸತಾಯಿಸಿದರೆ (doxing) ನಿಮ್ಮನ್ನು ರಕ್ಷಿಸಿಕೊಳ್ಳಲು ನೀವೇನು ಮಾಡುತ್ತೀರಿ ಎಂಬುದರ ಕುರಿತು ಯೋಚಿಸಿ. ಆನ್‌ಲೈನ್ ಕಿರುಕುಳದ ಬಗ್ಗೆ ನಿಮ್ಮ ಮಾಧ್ಯಮ ಸಂಸ್ಥೆಯ ಜೊತೆ ಮಾತನಾಡಿ ಮತ್ತು ಟ್ರೋಲಿಂಗ್ ಗಂಭೀರವಾದರೆ ಒಂದು ಕಾರ್ಯಯೋಜನೆ ಸಿದ್ಧವಾಗಿರಲಿ.

ದಾಳಿಯ ಸಂದರ್ಭದಲ್ಲಿ:

  • ಆನ್‌ಲೈನ್ ಕಿರುಕುಳಕೋರರ ಜೊತೆ ವ್ಯವಹರಿಸುವುದನ್ನು ತಪ್ಪಿಸಿಕೊಳ್ಳಿ. ಏಕೆಂದರೆ ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.
  • ಸಾಧ್ಯವಾದಲ್ಲಿ ನಿಮ್ಮೆಲ್ಲಾ ಆಕೌಂಟ್‌ಗಳನ್ನು ಖಾಸಗಿ ಮಾಡಿಕೊಂಡು, ಕಿರಕುಳ ನಿಲ್ಲುವ ತನಕ ಆಫ್‌ಲೈನ್ ಆಗಿರಿ. 
  • ನಿಮ್ಮೆಲ್ಲಾ ಅಕೌಂಟ್‌ಗಳಲ್ಲಿ 2ಎಫ್ಎ ಚಾಲ್ತಿಯಲ್ಲಿದೆಯೇ ಪರೀಕ್ಷಿಸಿ ಮತ್ತು ನಿಮ್ಮ ಎಲ್ಲಾ ಅಕೌಂಟ್‌ಗಳಿಗೆ ಪ್ರತ್ಯೇಕ, ಉದ್ದವಾದ ಮತ್ತು ವಿಶಿಷ್ಟವಾದ ಪಾಸ್‌ವರ್ಡ್ ಇರಲಿ.
  • ಯಾವುದೇ ಆತಂತಕಾರಿ ಬರಹ ಅಥವಾ ಚಿತ್ರಗಳ ದಾಖಲೆ ಇರಿಸಿಕೊಳ್ಳಿ. ಕಿರುಕುಳದ ಸ್ಕ್ರೀನ್ ಶಾಟ್, ಸಮಯ, ದಿನಾಂಕ ಮತ್ತು ಟ್ರೋಲ್‌ನ ಮೀಡಿಯಾ ಹ್ಯಾಂಡಲ್ ಇತ್ಯಾದಿಗಳು ಇರಬೇಕು. ನೀವು ನಿಮ್ಮ ಮಾಧ್ಯಮ ಸಂಸ್ಥೆಗೆ, ಸಂಪಾದಕರಿಗೆ, ಅಭಿವ್ಯಕ್ತಿ  ಸ್ವಾತಂತ್ರ್ಯದ ಪರ ಹೋರಾಡುವ ಸಂಸ್ಥೆಗಳಿಗೆ ಅಥವಾ ಅಗತ್ಯ ಬಿದ್ದರೆ, ಅಧಿಕಾರಿಗಳಿಗೆ ತೋರಿಸಬೇಕೆಂದಿದ್ದರೆ ಈ ಮಾಹಿತಿಗಳು ಅನುಕೂಲವಾಗುತ್ತವೆ.
  • ನಿಮಗೆ ಆನ್‌ಲೈನ್ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ನಿಮ್ಮ ಕುಟುಂಬದವರಿಗೆ, ಉದ್ಯೋಗದಾತರಿಗೆ ಮತ್ತು ಗೆಳೆಯರಿಗೆ ತಿಳಿಸಿ. ವಿರೋಧಿಗಳು ಸಾಮಾನ್ಯವಾಗಿ ನಿಮ್ಮ ಹೆಸರು ಹಾಳು ಮಾಡಲು ನಿಮ್ಮ ಕುಟಂಬದ ಸದಸ್ಯರು ಮತ್ತು ಕೆಲಸದ ಸ್ಥಳಕ್ಕೆ ಸುಳ್ಳು ಮಾಹಿತಿ/ ಚಿತ್ರಗಳನ್ನು ಕಳುಹಿಸುತ್ತಾರೆ.
  • ಆನ್‌ಲೈನ್ ಕಿರುಕುಳವು ಏಕಾಂಗಿತನದ ಭಾವನೆಯನ್ನು ಉಂಟುಮಾಡಬಹುದು. ನಿಮಗೆ ನೆರವಾಗಲು ನೀಡಲು ಒಂದು ಬೆಂಬಲ ಜಾಲವಿರುವುದನ್ನು ಖಾತರಿಪಡಿಸಿಕೊಳ್ಳಿ. ಇದರಲ್ಲಿ ನಿಮ್ಮ ಉದ್ಯೋಗದಾತರು ಸೇರಿದ್ದರೆ ಒಳ್ಳೆಯದು.

ಆನ್‌ಲೈನ್ ಕಿರುಕುಳದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ಕುರಿತ ಹೆಚ್ಚಿನ ವಿವರವಾದ ಮಾಹಿತಿಗಳಿಗಾಗಿ ಸಿಪಿಜೆಯ ಸಂಪನ್ಮೂಲಗಳನ್ನು ಓದಿ.

ದೈಹಿಕ ಸುರಕ್ಷೆ: ಸಭೆಗಳು ಮತ್ತು ಪ್ರತಿಭಟನೆಗಳನ್ನು ಸುರಕ್ಷಿತವಾಗಿ ವರದಿ ಮಾಡುವುದು

ಚುನಾವಣೆಗಳ ಸಂದರ್ಭದಲ್ಲಿ ಪತ್ರಕರ್ತರು ಹೆಚ್ಚಾಗಿ ಸಾರ್ವಜನಿಕ ಸಭೆಗಳು, ಪ್ರಚಾರ ಸಭೆಗಳು, ಲೈವ್ ಪ್ರಸಾರ ಮತ್ತು ಪ್ರತಿಭಟನೆಗಳಲ್ಲಿ ಜನರ ಗುಂಪುಗಳ ನಡುವೆ ಇದ್ದು ಕೆಲಸ ಮಾಡಬೇಕಾಗುತ್ತದೆ. 

ಅಪಾಯಗಳನ್ನು ಕಡಿಮೆ ಮಾಡಲು:

ರಾಜಕೀಯ ಘಟನೆಗಳು ಮತ್ತು ಸಭೆಗಳು
  • ನಿಮ್ಮ ಬಳಿ ಮಾನ್ಯತೆ ಪಡೆದ ಅಥವಾ ಸರಿಯಾದ ಗುರುತುಪತ್ರ ಇರುವುದನ್ನು ಖಾತರಿಪಡಿಸಿಕೊಳ್ಳಿ. ನೀವು ಸ್ವತಂತ್ರ (ಪ್ರೀಲಾನ್ಸ್) ಪತ್ರಕರ್ತರಾಗಿದ್ದಲ್ಲಿ, ನಿಮ್ಮ ಉದ್ಯೋಗದಾತರಿಂದ ನಿಮ್ಮನ್ನು ನಿಯೋಜಿಸಿರುವ ಬಗ್ಗೆ ಪತ್ರವಿದ್ದರೆ ಒಳ್ಳೆಯದು. ಸುರಕ್ಷಿತವಾಗಿದ್ದಲ್ಲಿ ಮಾತ್ರ ಅದನ್ನು ಪ್ರದರ್ಶಿಸಿ. ಅದನ್ನು ಕೊರಳಿಗೆ ನೇತುಹಾಕದೆ, ಬೆಲ್ಟಿಗೆ ಕ್ಲಿಪ್ ಮಾಡಿ.
  • ಯಾವತ್ತೂ ಗುಂಪಿನ ಮನೋಸ್ಥಿತಿ (ಮೂಡ್) ಅಂದಾಜು ಮಾಡಿ. ಸಾಧ್ಯವಾದಲ್ಲಿ ಈಗಾಗಲೇ ಸ್ಥಳದಲ್ಲಿ ಇರುವ ಪತ್ರಕರ್ತರಿಗೆ ಕರೆ ಮಾಡಿ ಅಲ್ಲಿನ ಮನಸ್ಥಿತಿ ತಿಳಿದುಕೊಳ್ಳಿ. ಅಗತ್ಯ ಬಿದ್ದರೆ, ಬೇರೊಬ್ಬ ವರದಿಗಾರ ಅಥವಾ ಛಾಯಾಗ್ರಾಹಕರನ್ನು ನಿಮ್ಮ ಜೊತೆಗೆ ಕರೆದೊಯ್ಯಿರಿ. 
  • ಅಗತ್ಯ ಬಿದ್ದಲ್ಲಿ ಮಾಧ್ಯಮ ಸಂಸ್ಥೆಯ ಚಿಹ್ನೆ ಇಲ್ಲದಿರುವ ಉಡುಪುಗಳನ್ನು ಧರಿಸದಿರಿ ಮತ್ತು ಸಲಕರಣೆಗಳು ಮತ್ತು ವಾಹನಗಳಿಂದ ಸಂಸ್ಥೆಯ ಚಿಹ್ನೆಗಳನ್ನು ತೆಗೆಯಿರಿ. ಸೂಕ್ತವಾದ ಪಾದರಕ್ಷೆಗಳನ್ನು ಧರಿಸಿ
  • ಪರಿಸ್ಥಿತಿ ತೀರಾ ಅಪಾಯಕಾರಿಯಾದಲ್ಲಿ ಅಲ್ಲಿಂದ ಪಾರಾಗುವ ಕಾರ್ಯತಂತ್ರ ಇರಲಿ. ಸ್ಥಳಕ್ಕೆ ತಲಪಿದ ಕೂಡಲೇ ನಿಮಗೆ ಈ ಯೋಜನೆ ಬೇಕಾಗಬಹುದು. ಆದರೆ, ಆದರೆ, ಕೆಲಸ ಆರಂಭಿಸುವ ಮೊದಲೇ ಇದನ್ನು ಮಾಡಿ. ನಿಮ್ಮ ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಅಥವಾ ನಿಮಗೆ ಖಾತರಿಯಾದ ಬೇರೆ ಸಾರಿಗೆ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ.
  • ಪರಿಸ್ಥಿತಿ ದ್ವೇಷಮಯವಾಗಿದ್ದರೆ, ಆ ಜಾಗದ ಹತ್ತಿರ ಸುಳಿದಾಡುತ್ತಾ ಇರಬೇಡಿ ಮತ್ತು ಜನರನ್ನು ಪ್ರಶ್ನಿಸಲು ಆರಂಭಿಸಬೇಡಿ. 
  • ಉದ್ದೇಶವು ಹೊರಗಿನಿಂದ ವರದಿ ಮಾಡುವುದಾಗಿದ್ದರೆ, ಒಬ್ಬ ಸಹೋದ್ಯೋಗಿಯ ಜೊತೆ ಕೆಲಸ ಮಾಡುವುದು ವಿವೇಕಯುತ. ಮುಕ್ತವಾದ ಹೊರದಾರಿ ಇರುವ ಸುರಕ್ಷಿತ ಸ್ಥಳದಿಂದ ವರದಿ ಮಾಡಿ ಮತ್ತು ನಿಮ್ಮ ಸಂಚಾರ/ ಸಾರಿಗೆಯ ದಾರಿಯನ್ನು ಮೊದಲೇ ಪರಿಚಯಠ ಮಾಡಿಕೊಂಡಿರಿ. ಹಲ್ಲೆಯು ಒಂದು ನೈಜ ಸಾಧ್ಯತೆಯಾಗಿದ್ದರೆ ಭದ್ರತೆಯ ವ್ಯವಸ್ಥೆಯನ್ನು ಪರಿಗಣಿಸಿ, ಅಗತ್ಯವಾಗಿ ಎಷ್ಟು ಬೇಕೋ ಅಷ್ಟು ಕಡಿಮೆ ಸಮಯ ಮಾತ್ರವೇ ಸ್ಥಳದಲ್ಲಿರಿ.
  • ಒಳಾಂಗಣದ ಸಭೆಗಳಲ್ಲಿ ಸುರಕ್ಷಿತವಾಗಿದ್ದರೆ ಮಾತ್ರವೇ ಹೊರಗಿದ್ದು, ಇಲ್ಲವಾದಲ್ಲಿ ಮಾಧ್ಯಮಗಳಿಗೆ ಮೀಸಲಿರಿಸಿದ ಸ್ಥಳದಿಂದ ಮಾತ್ರವೇ ವರದಿ ಮಾಡಿ. ನೀವು ಅಪಾಯದಲ್ಲಿ ಇದ್ದರೆ, ಭದ್ರತೆಯವರು ಆಥವಾ ಪೊಲೀಸರು ನಿಮಗೆ ನೆರವಾಗಬಹುದೇ ಎಂಬುದನ್ನು ಅಂದಾಜು ಮಾಡಿ ಮತ್ತು ನೀವು ಪಾರಾಗಬಹುದಾದ ದಾರಿಗಳನ್ನು ಗುರುತಿಸಿ.
  • ಗುಂಪು/ಭಾಷಣಕಾರರು ಮಾಧ್ಯಮದವರ ಕುರಿತು ದ್ವೇಷ ಭಾವ ಹೊಂದಿದ್ದರೆ ಮೌಖಿಕ ನಿಂದನೆಗೆ ಸಿದ್ಧವಾಗಿರಿ. ಅಂತಹ ಸಂದರ್ಭದಲ್ಲಿ ನಿಮ್ಮ ಕೆಲಸ ಮಾತ್ರವೇ ಮುಂದುವರಿಸಿ ವರದಿ ಮಾಡಿ. ಬೈಗಳಗಳಿಗೆ ಪ್ರತಿಕ್ರಿಯೆ ನೀಡಬೇಡಿ. ಉಳಿದವರು ಅಲ್ಲದಿದ್ದರೂ, ನೀವು ಒಬ್ಬ ವೃತ್ತಿಪರರು ಎಂಬುದನ್ನು ನೆನಪಿಡಿ.
  • ಉಗುಳುವುದು ಅಥವಾ ಚಿಕ್ಕಪುಟ್ಟ ವಸ್ತುಗಳನ್ನು ಎಸೆಯುವುದು ಒಂದು ಸಾಧ್ಯತೆ ಎಂದು ಕಂಡುಬಂದಲ್ಲಿ ಮತ್ತು ಆಗಲೂ ನೀವು ವರದಿ ಮಾಡಲೇಬೇಕು ಎಂದು ನಿರ್ಧರಿಸಿದ್ದಲ್ಲಿ ವಾಟರ್‌ಪ್ರೂಪ್ ಮತ್ತು ಮಚ್ಚಿದ ಬಂಪ್ ಕ್ಯಾಪ್ ಧರಿಸಿ. 
  • ಕೆಲಸವು ಕಷ್ಟಕರವಾಗಿದ್ದರೆ, ಅದನ್ನು ಮುಚ್ಚಿಟ್ಟು ಕೂರಬೇಡಿ. ನಿಮ್ಮ ಉದ್ಯೋಗದಾತರಿಗೆ ಮತ್ತು ಸಹೋದ್ಯೋಗಿಗಳಿಗೆ ಹಾಗೆಂದು ಹೇಳಿ. ಅವರು ಸಿದ್ಧರಾಗಿರುವುದು ಮತ್ತು ಪ್ರತಿಯೊಬ್ಬರೂ ಪರಸ್ಪರರಿಂದ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.
ಪ್ರತಿಭಟನೆಗಳು

ಪ್ರತಿಭಟನೆಗಳನ್ನು ವರದಿ ಮಾಡುವಾಗ ಅಪಾಯವನ್ನು ಕಡಿಮೆ ಮಾಡಲು:

  • ನಿಮ್ಮ ಕಾರ್ಯವನ್ನು ಮೊದಲೇ ಯೋಜಿಸಿ ಮತ್ತು ನಿಮ್ಮ ಮೊಬೈಲ್ ಫೋನಿನ ಬ್ಯಾಟರಿ ಫುಲ್ ಆಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ನೀವು ಹೋಗುತ್ತಿರುವ ಪ್ರದೇಶದ ಬಗ್ಗೆ ತಿಳಿದುಕೊಳ್ಳಿ. ತುರ್ತು ಸ್ಥಿತಿಯಲ್ಲಿ ನೀವೇನು ಮಾಬೇಕೆಂದು ಮುಂಚಿತವಾಗಿಯೇ ಯೋಜಿಸಿ. ನಿಮಗೆ ಉಪಯೋಗಿಸಲು ಗೊತ್ತಿದ್ದರೆ, ಒಂದು ವೈದ್ಯಕೀಯ ಕಿಟ್ಟನ್ನು ಜೊತೆಗೆ ಒಯ್ಯಿರಿ. ಯಾವತ್ತೂ ಒಬ್ಬ ಸಹೋದ್ಯೋಗಿಯ ಜೊತೆಗೆ ಕೆಲಸಮಾಡಲು ಪ್ರಯತ್ನಿಸಿ ಮತ್ತು ಮುಖ್ಯವಾಗಿ  ಸಾರ್ವಜನಿಕ ಸಭೆಗಳು ಮತ್ತು ಜನರು ಗುಂಪುಸೇರಿರುವ ಘಟನೆಗಳ ಬಗ್ಗೆ ವರದಿ ಮಾಡುವಾಗ ನಿಮ್ಮ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಿ.
  • ತ್ವರಿತವಾಗಿ ಚಲಿಸಲು ಸಾಧ್ಯವಾಗುವಂತ ಉಡುಪು ಮತ್ತು ಪಾದರಕ್ಷೆ ಧರಿಸಿ. ಸಡಿಲವಾದ, ನಿಮ್ಮನ್ನು ಹಿಡಿದುಕೊಳ್ಳಲು ಸುಲಭವಾದ ಅಥವಾ ಸುಲಭದಲ್ಲಿ ಬೆಂಕಿ ಹಿಡಿಯುವ (ಉದಾ: ನೈಲಾನ್) ಉಡುಪುಗಳನ್ನು ಧರಿಸಬೇಡಿ. 
  • ನಿಮ್ಮ ಸ್ಥಾನವನ್ನು ಯಾವಾಗಲೂ ಪರಿಗಣಿಸಿ, ಸುತ್ತಮುತ್ತಲೂ ನೋಡಬಹುದಾದ ಎತ್ತರದ ಸ್ಥಳ ಹೆಚ್ಚು ಸುರಕ್ಷತೆಯನ್ನು ನೀಡಬಹುದು.
  • ಯಾವುದೇ ಸ್ಥಳದಲ್ಲಿ ಇದ್ದರೂ, ಯಾವತ್ತೂ ಅಲ್ಲಿಂದ ಪಾರಾಗುವ ಒಂದು ದಾರಿಯನ್ನು ಮತ್ತು ನೀವು ಇತರರ ಜೊತೆಗೆ ಕೆಲಸ ಮಾಡುತ್ತಿದ್ದರೆ, ತುರ್ತು ಸ್ಥಿತಿಯಲ್ಲಿ ಎಲ್ಲರೂ ಒಟ್ಟುಸೇರಬೇಕಾದ ಸ್ಥಳವನ್ನು ಮೊದಲೇ ಯೋಜಿಸಿ. ವೈದ್ಯಕೀಯ ನೆರವು ಪಡೆಯಬಹುದಾದ ಅತ್ಯಂತ ಹತ್ತಿರದ ಸ್ಥಳ ನಿಮಗೆ ಗೊತ್ತಿರಲಿ. 
  • ಎಲ್ಲಾ ಸಮಯಗಳಲ್ಲಿ ನಿಮಗೆ ಪರಿಸ್ಥಿತಿಯ ಅರಿವು, ಅಂದಾಜು ಇರಬೇಕು. ನೀವು ಕೊಂಡೊಯ್ಯುವ ಬೆಲೆಬಾಳುವ ವಸ್ತುಗಳು ಮಿತಿಯಲ್ಲಿ ಇರಲಿ. ವಾಹನಗಳಲ್ಲಿ ನಿಮ್ಮ ಸಾಧನ ಸಲಕರಣೆಗಳನ್ನು ಬಿಟ್ಟುಹೋಗಬೇಡಿ. ಅವು ಕಳವಾಗುವ ಸಾಧ್ಯತೆಗಳಿವೆ. ಕತ್ತಲಾದ ನಂತರ ಕ್ರಿಮಿನಲ್ ಅಪಾಯಗಳು ಹೆಚ್ಚುತ್ತವೆ.
  • ಗುಂಪಿನೊಳಗೆ ಕೆಲಸ ಮಾಡುವುದಿದ್ದರೆ, ಒಂದು ಕಾರ್ಯತಂತ್ರವನ್ನು ಯೋಜಿಸಿ. ಜನಜಂಗುಳಿಯಿಂದ ಹೊರಗಿರುವುದು ಯಾವತ್ತೂ ಒಳ್ಳೆಯದು ಮತ್ತು ಪಾರಾಗಲು ಕಷ್ಟಕರವಾಗುವಂತೆ ಗುಂಪಿನ ನಡುವಿಗೆ ಸೇರಿಹೋಗಬೇಡಿ. ಒಂದು ಪಾರಾಗುವ ಹಾದಿಯನ್ನು ಗುರುತಿಸಿಕೋಂಡಿರಿ ಮತ್ತು ತಂಡವಾಗಿ ಕೆಲಸ ಮಾಡುವುದಿದ್ದರೆ ಒಂದು ತುರ್ತು ಭೇಟಿಯ ಸ್ಥಳವನ್ನು ಮೊದಲೇ ನಿಗದಿಪಡಿಸಿಕೊಂಡಿರಿ. 
  • ಮಾಧ್ಯಮ ಛಾಯಾಗ್ರಾಹಕರು ಯಾವತ್ತೂ ಜನರ ನಡುವೆ ಘಟನೆಗಳು ನಡೆಯುತ್ತಿರುವಲ್ಲಿಯೇ ಇರಬೇಕಾದುದರಿಂದ ಹೆಚ್ಚಿನ ಅಪಾಯದಲ್ಲಿ ಇರುತ್ತಾರೆ. ಛಾಯಾಗ್ರಾಹಕರು ತಮ್ಮ ಬೆನ್ನನ್ನು ಗಮನಿಸಿ ಎಚ್ಚರಿಕೆ ನೀಡಲು ಯಾರನ್ನಾದರೂ ಹೊಂದಿರಬೇಕು. ಕೆಲವು ಸೆಕೆಂಡುಗಳಿಗೊಮ್ಮೆ ಕ್ಯಾಮರಾದ ವ್ಯೂಫೈಂಡರಿನಿಂದ ತಲೆಯೆತ್ತಿ ಸುತ್ತಮುತ್ತಲೂ ನೋಡಲು ಮರೆಯಬಾರದು. ಕ್ಯಾಮರಾದ ಸ್ಟ್ರ್ಯಾಪನ್ನು ನಿಮ್ಮ ಕುತ್ತಿಗೆಯ ಸುತ್ತಲೂ ಹಾಕುವುದನ್ನು ತಪ್ಪಿಸಿ. ಇದರಿಂದ ಉಸಿರುಗಟ್ಟಿಸುವ ಅಪಾಯವಿದೆ. ಛಾಯಾಗ್ರಾಹಕರು ಯಾವಾಗಲೂ ದೂರ ನಿಂತು ಕೆಲಸ ಮಾಡುವ ಸೌಲಭ್ಯ ಹೊಂದಿರುವುದಿಲ್ಲ. ಆದುದರಿಂದ ಗುಂಪಿನ ನಡುವೆ ಹೆಚ್ಚು ಹೊತ್ತು ನಿಲ್ಲದೇ ನಿಮಗೆ ಬೇಕಾದ ಚಿತ್ರಗಳನ್ನು ತೆಗೆದುಕೊಂಡು ತಕ್ಷಣವೇ ಜಾಗ ಖಾಲಿ ಮಾಡಿ.
  • ಎಲ್ಲಾ ಪತ್ರಕರ್ತರು ಅಗತ್ಯಕ್ಕಿಂತ ಹೆಚ್ಚು ಹೊತ್ತು ಗುಂಪಿನಲ್ಲಿ ನಿಲ್ಲಬಾರದು ಎಂಬ ಅರಿವು ಹೊಂದಿರಬೇಕು. ಅದು ಯಾವಾಗ ಬೇಕಾದರೂ ತ್ವರಿತವಾಗಿ ತಿರುಗಿಬೀಳಬಹುದು.
  • ಕಾಶ್ಮೀರದಲ್ಲಿ ಭಾರತೀಯ ಪೊಲೀಸರು ಜೀವಂತ ಗುಂಡು, ರಬ್ಬರ್ ಗುಂಡುಗಳು ಮತ್ತು ಚರೆ ಗುಂಡು (ಪೆಲ್ಲೆಟ್)ಗಳನ್ನು ಗುಂಪುಗಳನ್ನು ಚದರಿಸಲು ಬಳಸಿದ್ದಾರೆ. ರಕ್ಷಣಾ ಸಾಧನಗಳನ್ನು ಧರಿಸುವುದನ್ನು ಪರಿಗಣಿಸಿ. ಒಂದು ವೇಳೆ ಇದು ಸೂಕ್ತವಲ್ಲ ಎಂದಾದರೆ, ಯಾವಾಗಲೂ ಪೊಲೀಸರನ್ನು ಗಮನಿಸಿ. ಬಂದೂಕುಗಳು ಕಾಣುತ್ತಿದ್ದರೆ, ಗಟ್ಟಿಯಾದ ಮರೆಯ ಕಡೆಗೆ ಸರಿಯಿರಿ ಮತ್ತು ಜನರು ಹುಚ್ಚೆದ್ದು ಓಡುವಾಗ ಕಾಲ್ತುಳಿತದ ಅಪಾಯ ತಪ್ಪಿಸಲು ಯಾವತ್ತೂ ಸಹಜವಾದ ಬಾಗಿಲು ಅಥವಾ ದಾರಿಯಲ್ಲಿ ನಿಲ್ಲಬೇಡಿ.

ಅಶ್ರುವಾಯು ಎದುರಿಸುವಾಗ ಅಪಾಯವನ್ನು ಕಡಿಮೆ ಮಾಡಲು:

  • ನೀವು ಗ್ಯಾಸ್ ಮಾಸ್ಕ್, ದೇಹ ಕವಚ, ಕಣ್ಣಿನ ರಕ್ಷಣೆ, ಹೆಲ್ಮೆಟ್ ಹೊಂದಿರುವ ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಧರಿಸಬೇಕು. 
  • ಉಬ್ಬಸ (ಅಸ್ತಮಾ) ಅಥವಾ ಉಸಿರಾಟದ ತೋಂದರೆ ಇರುವವರು ಅಶ್ರುವಾಯು ಪ್ರಯೋಗಿಸಬಹದಾದ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬೇಕು. ಇದೇ ರೀತಿಯಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವುದು ಉಚಿತವಲ್ಲ. ದೋಡ್ಡ ಪ್ರಮಾಣದಲ್ಲಿ ಅಶ್ರುವಾಯು ಉಪಯೋಗಿಸಿದಾಗ ಗಾಳಿಯಾಡದ ಪ್ರದೇಶಗಳಲ್ಲಿ ಈ ಆನಿಲವು ದಟ್ಟವಾಗಿ ಕವಿಯುವ ಸಾಧ್ಯತೆ ಇರುತ್ತದೆ. 
  • ಇಂತಹಾ ನೋಡಲು ಕಷ್ಟವಾಗುವ ಸಂದರ್ಭದಲ್ಲಿ ನಿಮಗೆ ಪಾರಾಗಲು ಸುಲಭವಾಗುವಂತೆ ಯಾವುದೇ ಗುರುತುಗಳನ್ನು (ಕಂಬಗಳು, ಫುಟ್‌ಪಾತ್‌ಗಳು, ಕಮಾನುಗಳು ಇತ್ಯಾದಿ) ಇತ್ಯಾದಿಗಳನ್ನು ಗುರುತಿಸಿ.
  • ನೀವು ಅಶ್ರುವಾಯುವಿನಲ್ಲಿ ಸಿಕ್ಕಿಬಿದ್ದರೆ, ಎತ್ತರದ ಸ್ಥಳವನ್ನು ಹುಡುಕಲು ಯತ್ನಿಸಿ, ಗಾಳಿಯಾಡುವಲ್ಲಿ ನಿಂತು ಗಾಳಿಯು ಅಶ್ರುವಾಯುವನ್ನು ಹೊತ್ತೊಯ್ಯಲು ಬಿಡಿ. ಯಾವುದೇ ಕಾರಣಕ್ಕೂ ಕಣ್ಣು ಮತ್ತು ಮುಖವನ್ನು ಉಜ್ಜಬೇಡಿ. ಅದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಸಾಧ್ಯವಾದ ತಕ್ಷಣವೇ ತಣ್ಣೀರಿನ ಶವರ್‌ನ ಅಡಿಯಲ್ಲಿ ನಿಲ್ಲಿ. ಆದರೆ, ಸ್ನಾನ ಮಾಡಬೇಡಿ. ಹರಳುಗಳನ್ನು ಸಂಪೂರ್ಣವಾಗಿ ತೆಗೆಯಲು ಬಟ್ಟೆಗಳನ್ನು ಹಲವಾರು ಬಾರಿ ಒಗೆಯಬೇಕಾಗುತ್ತದೆ ಅಥವಾ ಎಸೆಯಲೂ ಬೇಕಾಗುತ್ತದೆ. 
  • ಭಾರತದಲ್ಲಿ ಪ್ರತಿಭಟನಕಾರರು ಪತ್ರಕರ್ತರ ಮೇಲೆ ದಾಳಿ ಮಾಡಿದ್ದಾರೆ. ಇಂತಹ ಆಕ್ರಮಣಗಳನ್ನು ಎದುರಿಸುವಾಗ ಕೆಳಗಿನವುಗಳನ್ನು ಪರಿಗಣಿಸಿ:
  • ಸಂಭಾವ್ಯ ಹಲ್ಲೆಕೋರರು ಇರಬಹುದಾದ ಗುಂಪನ್ನು ಪ್ರವೇಶಿಸುವ ಮೊಧಲೇ ಪತ್ರಕರ್ತರ ಕುರಿತಂತೆ ಪ್ರತಿಭಟನಾಕಾರರ ಮನೋಸ್ಥಿತಿಯನ್ನು ಅಂದಾಜು ಮಾಡಿ.
  • ದಾಳಿ ಮಾಡಬಹುದಾದ ವ್ಯಕ್ತಿಯ ದೇಹಭಾಷೆಯನ್ನು ಗಮನಿಸಿ ಮತ್ತು ಸಮಾಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಲು ನಿಮ್ಮದೇ ದೇಹಭಾಷೆಯನ್ನು ಬಳಸಿ.
  • ದಾಳಿಕೋರನ ಜೊತೆ ಕಣ್ಣಿನ ಸಂಪರ್ಕದಲ್ಲಿರಿ ಮತ್ತು ತೆರೆದ ಕೈಗಳ ಸಂಜ್ಞೆಗಳನ್ನು ಬಳಸಿ ಮತ್ತು ಸಮಾಧಾನಗೊಳಿಸುವ ರೀತಿಯಲ್ಲಿ ಮಾತನಾಡುತ್ತಲೇ ಇರಿ.
  • ಬೆದರಿಸುವ ವ್ಯಕ್ತಿಯಿಂದ ಒಂದು ಕೈಯಳತೆ ದೂರ ಕಾಪಾಡಿಕೊಂಡಿರಿ. ನಿಧಾನಕ್ಕೆ ಹಿಂದಕ್ಕೆ ಸರಿದು ದೃಢವಾಗಿ, ಯಾವುದೇ ಆಕ್ರಮಣ ತೋರದೇ ಗುಂಪಿನಿಂದ ದೂರವಾಗಿ. ನೀವು ಮೂಲೆಗೆ ಸೇರಿದರೆ ಮತ್ತು ಅಪಾಯದಲ್ಲಿ ಇದ್ದರೆ ಬೊಬ್ಬೆ ಹಾಕಿ.
  • ಆಕ್ರಮಣವು ಹೆಚ್ಚಿದಲ್ಲಿ, ನಿಮ್ಮ ತಲೆಯನ್ನು ರಕ್ಷಿಸಲು ಒಂದು ಕೈಯನ್ನು ಮುಕ್ತವಾಗಿರಿಸಿ ಮತ್ತು ಕೆಳಗೆ ಬೀಳದಂತೆ ನಿಧಾನವಾದ ಚಿಕ್ಕ ಹಜ್ಜೆಗಳೊಂದಿಗೆ ಚಲಿಸಿ. ನೀವು ತಂಡದಲ್ಲಿದ್ದರೆ, ಜೊತೆಗಿದ್ದು  ತೋಳುಗಳನ್ನು ಜೋಡಿಸಿಕೊಳ್ಳಿ.
  • ಆಕ್ರಮಣವನ್ನು ದಾಖಲಿಸಿಕೊಳ್ಳು ಕೆಲವು ಸಲ ಪತ್ರಿಕಾ ವೃತ್ತಿಗೆ ಬಹುಮುಖ್ಯವಾಗಿದ್ದರೂ, ಪರಿಸ್ಥಿತಿ ಮತ್ತು ನಿಮ್ಮ ಸ್ವಂತ ಸುರಕ್ಷೆಯ ಕುರಿತು ಜಾಗೃತರಾಗಿರಿ. ಆಕ್ರಮಣಕಾರಿಯಾಗಿರುವ ವ್ಯಕ್ತಿಗಳ ಚಿತ್ರಗಳನ್ನು ತೆಗೆಯುವುದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
  • ನಿಮ್ಮನ್ನು ತಡೆದು ಸುಲಿಗೆಗೆ ಯತ್ನಿಸಿದರೆ, ದಾಳಿಕೋರನಿಗೆ ಬೇಕಾದುದನ್ನು ಕೊಡಿ. ಸಲಕರಣೆಗಳು ನಿಮ್ಮ ಜೀವಕ್ಕಿಂತ ಮುಖ್ಯವಲ್ಲ.

ದೈಹಿಕ ಸುರಕ್ಷೆ: ದ್ವೇಷಕಾರಿ ಸಮುದಾಯದಲ್ಲಿ ವರದಿ ಮಾಡುವುದು

ಮಾಧ್ಯಮ ಅಥವಾ ಹೊರಗಿನವರ ಕುರಿತು ದ್ವೇಷಕಾರಿಯಾಗಿರುವ ಪ್ರದೇಶ ಆಥವಾ ಸಮುದಾಯದಿಂದ ಪತ್ರಕರ್ತರು ಆಗಾಗ ವರದಿ ಮಾಡಬೇಕಾಗುತ್ತದೆ. ಮಾಧ್ಯಮಗಳು ತಮ್ಮ ಹಿತಾಸಕ್ತಿಗಳನ್ನು ನ್ಯಾಯಯುತವಾಗಿ ಪ್ರತಿನಿಧಿಸುತ್ತಲ್ಲ ಅಥವಾ ತಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತದೆ ಎಂದು ಒಂದು ಸಮುದಾಯವು ಭಾವಿಸಿದಾಗ ಇದು ನಡೆಯಬಹುದು. ಚುನಾವಣೆಗಳ ಸಂದರ್ಭದಲ್ಲಿ ಪತ್ರಕರ್ತರು ದೀರ್ಘಕಾಲ ಅಂತಹ ಸಮುದಾಯಗಳ ನಡುವೆ ಕೆಲಸಮಾಡಬೇಕಾಗಿ ಬರುತ್ತದೆ.

ಅಪಾಯವನ್ನುಕಡಿಮೆಮಾಡಲು:

  • ಸಾಧ್ಯವಾದಲ್ಲಿ ಆ ಸಮುದಾಯ ಮತ್ತು ಅವರ ದೃಷ್ಟಿಕೋನದ ಕುರಿತು ಅಧ್ಯಯನ ಮಾಡಿ. ಮಾಧ್ಯಮಗಳಿಗೆ ಅವರ ಪ್ರತಿಕ್ರಿಯೆ ಏನಿರಬಹುದು ಎಂಬ ಕುರಿತು ಒಂದು ತಿಳುವಳಿಕೆ ಬೆಳೆಸಿಕೊಂಡು, ಅಗತ್ಯ ಬಿದ್ದರೆ ಹೆಚ್ಚಾಗಿ ಅವರ ಕಣ್ಣಿಗೆ ಬೀಳದಂತಿರಿ.
  • ಮಾಧ್ಯಮ ಸಂಸ್ಥೆಯ ಹೆಸರು, ಚಿಹ್ನೆಗಳಿಲ್ಲದ ಉಡುಪು ಧರಿಸಿ. ಅಗತ್ಯ ಬಿದ್ದರೆ ಸಲಕರಣೆಗಳು ಮತ್ತು ವಾಹನಗಳಿಂದ ಹೆಸರು ಮತ್ತು ಚಿಹ್ನೆಗಳನ್ನು ತೆಗೆಯಿರಿ. ಸೂಕ್ತವಾದ ಉಡುಪು ಮತ್ತು ಪಾದರಕ್ಷೆ ಧರಿಸಿ.
  • ನಿಮಗೆ ಉಪಯೋಗಿಸಲು ಗೊತ್ತಿದ್ದರೆ, ವೈದ್ಯಕೀಯ ಕಿಟ್ಟನ್ನು ಜೊತೆಗೆ ಒಯ್ಯಿರಿ.
  • ನಮುದಾಯದೊಳಗೆ ಪ್ರವೇಶವನ್ನು ಗಿಟ್ಟಿಸಿ. ಆಹ್ವಾನವಿಲ್ಲದೇ ಆಥವಾ ನಿಮ್ಮ ಪರವಾಗಿ ಮಾತನಾಡಲು ಸಮುದಾಯದ ಯಾರಾದರೂ ಇಲ್ಲದೇ ಹೋಗುವುದು ಸಮಸ್ಯೆಗಳನ್ನು ಉಂಟುಮಾಡಬಹುದು. ಸ್ಥಳೀಯರು ಯಾರನ್ನಾದರೂ ನೇಮಿಸಿ ಅಥವಾ ಅನುಮತಿ ಪಡೆಯಿರಿ. ಅವರು ನಿಮ್ಮ ಚಟುವಟಿಕೆಗಳ ಸಮನ್ವಯದಲ್ಲಿ ನೆರಬಹುದಾದ ಸಮುದಾಯದಲ್ಲಿ ಪ್ರಭಾವ ಹೊಂದಿರುವವರು ಆಗಿರಬೇಕು. ತುರ್ತು ಸಂದರ್ಭದಲ್ಲಿ ನಿಮಗೆ ನೆರಬಹುದಾದ ಯಾರಾದರೂ ಪ್ರಭಾವಿಯನ್ನು ಗುರುತಿಸಿ. 
  • ಎಲ್ಲಾ ಸಮಯದಲ್ಲೂ ವ್ಯಕ್ತಿಗಳಿಗೆ, ಅವರ ನಂಬಿಕೆ/ಆತಂಕ, ಹಿತಾಸಕ್ತಿಗಳಿಗೆ ಗೌರವ ತೋರಿಸಿ.
  • ರಾತ್ರಿಯ ವೇಳೆಯಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ: ಅಪಾಯವು ನಾಟಕೀಯವಾಗಿ ಹೆಚ್ಚುತ್ತದೆ.
  • ಸಮುದಾಯದಲ್ಲಿ ವ್ಯಾಪಕವಾಗಿ ಅಲ್ಕೋಹಾಲ್ ಅಥವಾ ಮಾದಕವಸ್ತು ಬಳಕೇ ಇದ್ದಲ್ಲಿ ಅನೂಹ್ಯತೆಯ, ಅನಿಶ್ಚಿತತೆಯ ಅಂಶ ಹೆಚ್ಚುತ್ತದೆ.
  • ನೀವು ಕೊಂಡೊಯ್ಯುವ ಬೆಲೆಬಾಳುವ ವಸ್ತುಗಳು/ನಗದಿನ ಪ್ರಮಾಣವನ್ನು ಮಿತವಾಗಿ ಇರಿಸಿ. ಕಳ್ಳರು ನಿಮ್ಮ ಸಲಕರಣೆಗಳಿಂದ ಆಕರ್ಷಿತರಾಗಬಹುದೆ? ಯಾರಾದರೂ ನಿಮ್ಮನ್ನು ಅಡ್ಡಹಾಕಿದಲ್ಲಿ ಅವರಿಗೆ ಬೇಕಾದುದನ್ನು ಕೊಡಿ. ಸಲಕರಣೆಗಳು ಜೀವಕ್ಕಿಂತ ಮುಖ್ಯವಲ್ಲ. 
  • ತಂಡವಾಗಿ ಇಲ್ಲವೇ ಹಿನ್ನೆಲೆ ಬೆಂಬಲದೊಂದಿಗೆ ಕೆಲಸ ಮಾಡುವುದು ಸೂಕ್ತ. ಅಪಾಯದ ಮಟ್ಟಕ್ಕೆ ಅನುಗುಣವಾಗಿ ಅಗತ್ಯ ಬೆಂಬಲ ತಂಡವು ಅಗತ್ಯ ಬಿದ್ದರೆ ಪ್ರತಿಸ್ಪಂದಿಸಲು ಹತ್ತಿರದ ಸುರಕ್ಷಿತ ಸ್ಥಳಗಳಲ್ಲಿ (ಶಾಪಿಂಗ್ ಮೋಲ್, ಪೆಟ್ರೋಲ್ ಬಂಕ್) ಕಾಯಬಹುದು.
  • ನಿಮ್ಮ ಭೇಟಿಯನ್ನು ಮೊದಲೇ ಯೋಜಿಸಿ. ಪ್ರದೇಶದ ಭೌಗೋಳಿಕತೆಯ ಕುರಿತು ಯೋಚಿಸಿ, ಅದರಂತೆ ಯೋಜಿಸಿ.
  • ನಿಮ್ಮ ವಾಹನವನ್ನು ತುರ್ತಾಗಿ ಹೋಗಲು ಸಾಧ್ಯವಾಗುವ ಹಾಗೆ ನಿಲ್ಲಿಸಿ. ಚಾಲಕ ವಾಹನದಲ್ಲೇ ಸಿದ್ಧವಾಗಿ ಇದ್ದರೆ ಒಳ್ಳೆಯದು.
  • ನೀವು ನಿಮ್ಮ ವಾಹನದಿಂದ ದೂರವಾಗಿ ಕೆಲಸ ಮಾಡಬೇಕಾಗಿದ್ದರೆ, ಅದಿರುವಲ್ಲಿಗೆ ಮರಳುವುದು ಹೇಗೆ ಎಂದು ತಿಳಿದಿರಿ. ಹೆಗ್ಗುರುತುಗಳನ್ನು ಗಮನಿಸಿ, ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಿ. 
  • ವೈದ್ಯಕೀಯ ತುರ್ತು ಸಂದರ್ಭದಲ್ಲಿ ಎಲ್ಲಿಗೆ ಹೋಗಬೇಕು ಎಂದು ತಿಳಿದಿರಿ ಮತ್ತು ಒಂದು ನಿರಾಗಮನ ಕಾರ್ಯತಂತ್ರ ರೂಪಿಸಿ.
  • ಅಪಾಯ ಹೆಚ್ಚಾಗಿದ್ದರೆ ಭದ್ರತೆಯ ಅಗತ್ಯವನ್ನು ಪರಿಗಣಿಸಿ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮನ್ನು ಮತ್ತು ನಿಮ್ಮ ಸಲಕರಣೆಗಳನ್ನು ರಕ್ಷಿಸಲು ಮತ್ತು ಬೆಳೆಯುತ್ತಿರುವ ಅಪಾಯವನ್ನು ಗುರುತಿಸಿ ಎಚ್ಚರಿಕೆ ನೀಡಲು ಸ್ಥಳೀಯ ವ್ಯಕ್ತಿಯೊಬ್ಬರನ್ನು ಗೊತ್ತು ಮಾಡಿಕೊಳ್ಳುವುದು ಒಳ್ಳೆಯದು.
  • ವಿಶೇಷವಾಗಿ ನಿಮಗೆ ತಪ್ಪಿಸಿಕೊಳ್ಳಲು ಸುಲಭದ ದಾರಿ ಇಲ್ಲದಾಗ ಯಾವುದೇ ವ್ಯಕ್ತಿಯ ಫೊಟೋ/ವಿಡಿಯೋ ತೆಗೆಯುವ ಮೊದಲು ಅನುಮತಿ ಕೇಳುವುದು ಸಾಮಾನ್ಯವಾಗಿ ಒಳ್ಳೆಯದು. 
  • ನಿಮಗೆ ಬೇಕಾದ ವಿಷಯ ಸಿಕ್ಕಿದ ತಕ್ಷಣ ಜಾಗ ಖಾಲಿ ಮಾಡಿ ಮತ್ತು ಅಗತ್ಯಕ್ಕಿಂತ ಹೆಚ್ಚು ಹೊತ್ತು ಅಲ್ಲಿ ಸುಳಿದಾಡಬೇಡಿ. ನೀವು ಕಳೆಯಲಿರುವ ಸಮಯವನ್ನು ಮೊದಲೇ ನಿಗದಿತ ಸಮಯಕ್ಕೇ ಹೊರಬರುವುದು ಸಹಕಾರಿ. ತಂಡದ ಯಾವುದೇ ಸದಸ್ಯರು ಆತಂಕಕ್ಕೆ ಒಳಗಾದರೆ, ಚರ್ಚೆಯಲ್ಲಿ ಸಮಯ ಹಾಳು ಮಾಡದೇ ತಕ್ಷಣವೇ ಹೊರಬನ್ನಿ.
  • ಸುದ್ದಿಯನ್ನು ಪ್ರಕಟ/ಪ್ರಸಾರ ಮಾಡುವ ಮೊದಲು ನೀವು ಆ ಜಾಗಕ್ಕೆ ಮರಳಿ ಹೋಗಬೇಕಾದೀತು ಎಂಬುದನ್ನು ಪರಿಗಣಿಸಿ. ನಿಮ್ಮ ವರದಿಯ ನಂತರ ನೀವಲ್ಲಿ ಮರಳಿ ಹೋದಾಗ ಸ್ವಾಗತ ಸಿಗಬಹುದೇ?
ನವೆಂಬರ್ 7, 2023ರಂದು ಮಣಿಪುರದ ಇಂಫಾಲ್‌ನಲ್ಲಿ ಪ್ರತಿಸ್ಪರ್ಧಿ ಆದಿವಾಸಿಗಳ ನಡುವೆ ಗುಂಡಿನ ಚಕಮಕಿ ನಡೆಯುವ ಸ್ಥಳಕ್ಕೆ ಹೋಗದಂತೆ ಸೇನಾ ವಾಹನವನ್ನು ತಡೆಯುತ್ತಿರುವ ಮೀಟೀ ಸಮುದಾಯದ ನಿವಾಸಿಗಳು. ರಾಯ್ಟರ್ಸ್/ ಸ್ಥಳೀಯ ವರದಿಗಾರ

ಮಾನಸಿಕ ಸುರಕ್ಷೆ: ಸುದ್ದಿಯನೆಯ ಆಘಾತ, ಆತಂಕಗಳ ನಿರ್ವಹಣೆ

ಸುದ್ದಿಗಳು ಮತ್ತು ಪರಿಸ್ಥಿತಿಗಳು ಆಗಾಗ ಆಘಾತ ಮತ್ತು ಆತಂಕಗಳನ್ನು ಉಂಟುಮಾಡುತ್ತವೆ. ನೀವು ಈ ಒತ್ತಡ ಮತ್ತು ಆತಂಕಗಳನ್ನು ಕುರಿತು ಯೋಚಿಸುವಾಗ ಇವುಗಳನ್ನು ಪರಿಗಣಿಸಿ:

  • ಹಿಂಸಾಚಾರ ಬೀಭತ್ಸ ಚಿತ್ರಗಳು (ಸಾವು, ಅಪರಾಧದ ಸ್ಥಳಗಳು, ಸಾವಿನೊಂದಿಗೆ ಮುಖಾಮುಖಿ)
  • ದೊಡ್ಡ ಪ್ರಮಾಣದ ಅಪಘಾತಗಳು ಅಥವಾ ದುರಂತಗಳು (ರೈಲು/ವಿಮಾನ/ವಾಹನ ಅಪಘಾತಗಳು)
  • ಶೋಷಣೆಯ ಪ್ರಕರಣಗಳು, ಮುಖ್ಯವಾಗಿ ಮಕ್ಕಳು ಮತ್ತು ಮಕ್ಕಳನ್ನು ಒಳಗೊಂಡಿರುವಂತವು
  • ಸಿಬ್ಬಂದಿಯೊಂದಿಗೆ ನೇರ ಸಂಬಂಧ ಹೊಂದಿರುವ ಅಪಾಯಕಾರಿ, ನೋವಿನ ವರದಿಗಳು 
  • ಅನನುಭವಿ ಸಿಬ್ಬಂದಿ ಇಂತಹ ವಿಷಯಗಳನ್ನು ಮೊದಲ ಬಾರಿಗೆ ನೋಡಿದಾಗ.

ಇಂತಹಾ ದಿನಗಳಲ್ಲಿ ಸಂಸ್ಥೆಯ ಆಡಳಿತವು ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕು ಮತ್ತು ಕಾಳಜಿಯ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಕೆಳಗಿನ ಹಾದಿಯನ್ನು ಪರಿಗಣಿಸಿ, ಅಗತ್ಯ ಬಿದ್ದರೆ ಅದರಂತೆ ಕ್ರಮ ಕೈಗೊಳ್ಳಬೇಕು. ಎಷ್ಟರ ಮಟ್ಟಿಗೆ ಮಾರ್ಗದರ್ಶನವನ್ನು ಅನುಸರಿಸಬೇಕು ಎಂಬುದು ಘಟನೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ.

ಅಂತಹಾ ದಿನಗಳಲ್ಲಿ:

  • ಸಿಬ್ಬಂದಿಗೆ ನೀಡಲಾಗುವ ಕೆಲಸವನ್ನು ಆವರ್ತನೆಯಂತೆ  ಬದಲಾಯಿಸುತ್ತಾ ಇರಿ. ಆಗ ಅದೇ ಸಿಬ್ಬಂದಿ ಅದೇ ಕಷ್ಟದ ಕೆಲಸವನ್ನು ಹಲವಾರು ದಿನಗಳ ಕಾಲ ಮಾಡುವುದು ತಪ್ಪುತ್ತದೆ.
  • ಒಂದು ವಿಷಯವು ವೈಯಕ್ತಿಕವಾಗಿ ಆತಂಕಕಾರಿಯಾಗಿದ್ದಾಗ ನನಗಿದು ಸಾಧ್ಯವಿಲ್ಲ ಎಂದು ಹೇಳಬಹುದೆಂದು ನಿಮ್ಮ ತಂಡದ ಸದಸ್ಯರಿಗೆ ಗೊತ್ತಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಸವಾಲಿನ ವಿಷಯಗಳನ್ನು ನಿಭಾಯಿಸುವಲ್ಲಿ ತಮ್ಮ ಆತಂಕಗಳನ್ನು ವ್ಯಕ್ತಪಡಿಸಲು ತಾವು ಶಕ್ತರಾಗಿರುವ ಭಾವನೆ ಸಿಬ್ಬಂದಿಯಲ್ಲಿ ಇರಬೇಕು, ಇನ್ನಷ್ಟು ಪ್ರಶ್ನೆಗಳನ್ನು ಕೇಳದೆ ಅದನ್ನು ಸೂಕ್ಷ್ಮತೆಯಿಂದ ನಿಭಾಯಿಸಬೇಕು. ವಿಡಿಯೋ ಕೆಲಸವನ್ನು ಹೇಗೆ ನಿಯೋಜಿಸಲಾಗುತ್ತದೆ ಎಂಬುದಕ್ಕೆ ಇದೊಂದು ಮುಖ್ಯವಾದ ವಿಷಯ.
  • ವಿಡಿಯೋಗಳನ್ನು ಸಂಕಲನ ಎಂದರೆ ಎಡಿಟ್ ಮಾಡುವಾಗ ನಿಮ್ಮ ತಂಡದ ಸದಸ್ಯರಿಗೆ ನಡುನಡುವೆ ಬ್ರೇಕ್ ಸಿಗುತ್ತದೆ ಮತ್ತು ಕಷ್ಪಕರ ಚಿತ್ರಗಳ ಮೇಲೆ ಕೆಲಸ ಮಾಡುವಾಗ ಅವರಿಗೆ ಸ್ವಲ್ಪ ವಿರಾಮ ಸಿಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. 
  • ಈ ಕೆಲಸ ಮಾಡಬಹುದೇ ಎಂದು ಮೊದಲೇ ಮತ್ತು ಆಗಾಗ ಕೇಳಿ. ಕೇವಲ ಟೆಕ್ಸ್ಟ್ ಮೆಸೇಜುಗಳ ಮೂಲಕ ಅಲ್ಲ; ಕನಿಷ್ಟ ದಿನಕ್ಕೆರಡು ಸಲವಾದರೂ ನೀವು ಅವರೊಂದಿಗೆ ನೇರವಾಗಿ ಮಾತನಾಡಬೇಕು ಮತ್ತು ನೀವು ಮಾತನಾಡಲು ಸಿಗುತ್ತೀರಿ ಎಂದು ಅವರೆಲ್ಲರಿಗೂ ಮನವರಿಕೆಯಾಗಬೇಕು. ಈ ವಿಷಯದ ಕುರಿತು ಸಿಬ್ಬಂದಿಗಳ ನಡುವೆ ಮಾತುಕತೆಯನ್ನು ಪ್ರೋತ್ಸಾಹಿಸಬೇಕು.
  • ನಿಮ್ಮ ತಂಡವು ಈ ಕ್ಷೇತ್ರದಲ್ಲಿ ಭಾಗಿಯಾಗುತ್ತಿಲ್ಲ ಎಂದರೆ, ಉದಾರತೆ ತೋರಿ, ವಿಶೇಷವಾಗಿ ಒತ್ತಡದ ಅವಧಿಗಳಲ್ಲಿ  ಉಳಿದ ತಂಡಗಳಿಗೆ ನಿಮ್ಮ ತಂಡದ ಸದಸ್ಯರಿಗೆ ಎರವಲು ನೀಡಿ.
  • ವಿಶೇಷವಾಗಿ ಅತ್ಯಂತ ಒತ್ತಡದ ದಿನಗಳಲ್ಲಿ ಕೆಲಸದ ಸ್ಥಳವನ್ನು ಬಿಟ್ಟು ಹೋಗುವಾಗ ಎಲ್ಲರಿಗೂ ಪರಸ್ಪರ ನಂಬಿಕೆ ಇರುವುದನ್ನು ಖಾತರಿಪಡಿಸಿಕೊಳ್ಳಿ.
  •  ಡೀಬ್ರೀಫ್ ಸಂದರ್ಭದಲ್ಲಿ ಜವಾಬ್ದಾರಿಯುತ ಮ್ಯಾನೇಜರ್- ಈ ವರದಿಯಿಂದ ಸಿಬ್ಬಂದಿ ಆಘಾತ, ಆತಂಕಗಳಿಗೆ ಒಳಗಾಗಬಹುದು ಎಂದೂ ಸ್ವಲ್ಪ ಕಾಲ ಅದು ಸಂಪೂರ್ಣವಾಗಿ ಸಹಜ ಎಂದೂ ಒಪ್ಪಿಕೊಳ್ಳಬೇಕು. ಸಿಬ್ಬಂದಿ ಇಂತಹ ಆಘಾತ, ಆತಂಕಗಳಿಂದ ಪ್ರಭಾವಿತರಾದರೆ ಅವರು ತಮ್ಮ ಮ್ಯಾನೇಜರ್‌ ಜೊತೆಗೆ ಆ ಕುರಿತು ಮಾತನಾಡಬೇಕು. ತಮ್ಮ ಸಹೋದ್ಯೋಗಿಗಳ ಜೊತೆ ಮಾತನಾಡುವುದರಿಂದಲೂ ಪ್ರಯೋಜನವಾಗಬಹುದು.
  • ಅದರ ಬದಲು ಅವರು ಗುಪ್ತವಾಗಿ ಒಬ್ಬ ನಿಷ್ಪಕ್ಷಪಾತಿ ಸಲಹೆಗಾರರ ಜೊತೆಗೆ ಮಾತನಾಡಲು ಬಯಸುತ್ತಾರೆ ಎಂದಾದಲ್ಲಿ ಅವರಿಗೆ ಮಾತನಾಡಲು ಸಂಸ್ಥೆಯಲ್ಲಿ ಸಿಬ್ಬಂದಿ ನೆರವು ಕಾರ್ಯಕ್ರಮ (ಇಎಪಿ) ಅಥವಾ ಒಬ್ಬರು ಆಪ್ತ ಸಮಾಲೋಚಕರು ಇದ್ದಾರೆಯೇ?

ಮಾನಸಿಕ ಸುರಕ್ಷೆ: ಆಘಾತ ಅಥವಾ ಯಾತನೆ ಸಂಬಂಧಿ ಒತ್ತಡ ನಿರ್ವಹಣೆ

ಆಘಾತೋತ್ತರ ಒತ್ತಡ ಕಾಯಿಲೆ (Post-traumatic stress disorder- PTSD) ಎಂಬುದು ಆತಂಕಕಾರಿ ವಿಷಯಗಳ ಕುರಿತು ವರದಿ ಮಾಡುವ ಪತ್ರಕರ್ತರು ಎದುರಿಸುತ್ತಿರುವ ಒಂದು ಸಮಸ್ಯೆ ಎಂದು ಇಂದು ಹೆಚ್ಚುಹೆಚ್ಚಾಗಿ ಒಪ್ಪಿಕೊಳ್ಳಲಾಗುತ್ತಿದೆ.

ಸಾಂಪ್ರದಾಯಿಕವಾಗಿ ಈ ಸಮಸ್ಯೆಯನ್ನು ಯುದ್ಧ ಅಥವಾ ಸಂಘರ್ಷ ವಲಯಗಳಲ್ಲಿ ಕೆಲಸ ಮಾಡುವ ಅಥವಾ ಹೆಚ್ಚುಕಡಿಮೆ ಸಾವಿಗೆ ಹತ್ತಿರದ ಪರಿಸ್ಥಿತಿ ಎದುರಿಸಿ ಪಾರಾದ ಅಥವಾ ತೀರಾ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿಗಳ ಜೊತೆ ಮಾತ್ರ ಸಮೀಕರಿಸಲಾಗುತ್ತದೆ. ಆದರೆ, ಇತ್ತೀಚೆಗೆ ಯಾವುದೇ ಆತಂಕಕಾರಿ ವಿಷಯದ ಮೇಲೆ ಕೆಲಸ ಮಾಡುವ ಪತ್ರಕರ್ತರು ಕೂಡಾ ಪಿಟಿಎಸ್‌ಡಿ ಲಕ್ಷಣಗಳನ್ನು ಅನುಭವಿಸುತ್ತಿರುವ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ. ಶೋಷಣೆ ಅಥವಾ ಹಿಂಸಾಚಾರದ ವರದಿಗಳು (ಆಪರಾಧ ಸ್ಥಳದ ವರದಿಗಾರಿಕೆ, ಕ್ರಿಮಿನಲ್ ಕೋರ್ಟ್ ವಿಚಾರಣೆಗಳು ಅಥವಾ ಹಿಂಸಾತ್ಮಕ ದರೋಡೆ) ಅಥವಾ ದೊಡ್ಡ ಪ್ರಮಾಣದಲ್ಲಿ ಸಾವು ನೋವುಗಳನ್ನು ಉಂಟುಮಾಡುವ ಘಟನೆಗಳು (ರೈಲು, ವಾನ ಅಪಘಾತ/ ಗಣಿ ಕುಸಿತ) ಇತ್ಯಾದಿಗಳು ಕೂಡಾ ಅವುಗಳನ್ನು ವರದಿ ಮಾಡುವ ಪತ್ರಕರ್ತರಲ್ಲಿ ಆಘಾತ, ಆತಂಕ ಉಂಟುಮಾಡುವ ಸಾಧ್ಯತೆ ಇದೆ. ಆನ್‌ಲೈನ್‌ನಲ್ಲಿ ಕಿರುಕುಳ, ನಿಂದನೆ, ಬೆದರಿಕೆ, ಟ್ರೋಲ್‌ಗೆ ಒಳಗಾದವರು ಕೂಡಾ ಒತ್ತಡ ಸಂಬಂದಿ ಯಾತನೆಗೆ ಗುರಿಯಾಗಬಹುದು.

ಯಾವುದೇ ಸೆನ್ಸಾರ್ ಇಲ್ಲದ ಬಳಕೆದಾರರೇ ಹಾಕಿರುವ ವಿಷಯಗಳು ಡಿಜಿಟಲ್ ಕ್ಷೇತ್ರದಲ್ಲಿ ಬೆಳೆದು ಮುಂಚೂಣಿಗೆ ಬರುತ್ತಿವೆ. ಸದಾ ಸಾವು ನೋವಿನ ಭಯಾನಕ ಚಿತ್ರಗಳನ್ನು ನೋಡುತ್ತಿರುವ ಪತ್ರಕರ್ತರು ಮತ್ತು ಸಂಕಲನಕಾರರು ಈಗ ವಿಕೇರಿಯಸ್ ಟ್ರೌಮಾ ಎಂದು ಕರೆಯಲಾಗುವ ದ್ವಿತೀಯ ಹಂತದ ಆಘಾತ ಯಾತನೆಗೆ ಒಳಗಾಗಬಹುದು.

ಭಯಾನಕ ಘಟನೆಗಳು, ಅವುಗಳ ಚಿತಗಳು/ವಿಡಿಯೋ ನೋಡಿದ ಬಳಿಕ ಯಾತನೆ, ಒತ್ತಡಕ್ಕೆ ಗುರಿಯಾಗುವುದು ಒಂದು ಸಹಜ ಮಾನವ ಪ್ರತಿಕ್ರಿಯೆ ಎಂಬುದನ್ನು ಎಲ್ಲಾ ಪತ್ರಕರ್ತರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಎಲ್ಲರಿಗಾಗಿ:

  • ಆದರ ಬಗ್ಗೆ ಮಾತನಾಡಿ. ಸೀನಿಯರ್ ಮ್ಯಾನೇಜ್‌ಮೆಂಟ್‌ನಿಂದ ಹಿಡಿದು ಅತ್ಯಂತ ಕಿರಿಯ ನಿರ್ಮಾಪಕರ ತನಕ ಎಲ್ಲರೂ ಕಷ್ಪಕರ ಘಟನೆಗಳನ್ನು ಭಯಾನಕ ಚಿತ್ರಗಳನ್ನು ಆಥವಾ ಸವಾಲಿನ ಪರಿಸ್ಥಿತಿಗಳನ್ನು ಎದುರಿಸುವಾಗ ವಿಚಲಿತರಾಗುತ್ತಾರೆ. ನಿಮ್ಮ ಮ್ಯಾನೇಜರ್ ಅಥವಾ ಬೇರೊಬ್ಬ ಮೇಲ್ವಿಚಾರಕರು ಅಥವಾ ನಿಮ್ಮ ಪಕ್ಕದಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ಜೊತೆಗೆ ಮಾತನಾಡಿ. ಮೌನವಾಗಿ ಕಷ್ಟ ಅನುಭವಿಸದಿರಿ.
  • ವಿಡಿಯೋಗಳ ನಡುವೆ, ಒಂದು ನಿರ್ದಿಷ್ಟ ವರದಿಯಿಂದ ಅಥವಾ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ನಿಮಗೆ ವಿರಾಮ ಬೇಕೆಂದು ಹೇಳಿದರೆ, ಅದರಿಂದ ನಿಮ್ಮ ವೃತ್ತಿ ಜೀವನಕ್ಕೆ ಕುತ್ತೇನೂ ಉಂಟಾಗದು.
  • ನೀವು ಮಲಗುವ ಮೊದಲು ಭಯಾನಕ ವಿವರಗಳ ಚಿತ್ರ, ವಿಡಿಯೋ ನೋಡದಿರಿ. ಕಷ್ಟಕರ ವರದಿಯ ದಿನದ ನಂತರ ಮರೆಯಲೆಂದು ಬಾರಿಗೆ ಹೋಗಿ ಮಿತಿಮೀರಿ ಕುಡಿಯದಿರಿ. ನಿದ್ರಾಹೀನತೆಯು ನಿಮ್ಮ ಚೇತರಿಕೆಯ ಪ್ರಕ್ರಿಯೆಗೆ ಹಾನಿಯುಂಟುಮಾಡಬಹುದು. 
  • ಇಲ್ಲಿ ವ್ಯಾಯಾಮ ಮತ್ತು ಧ್ಯಾನ ನಿಮ್ಮ ಮಿತ್ರರು. ಅದೇ ರೀತಿಯಲ್ಲಿ ಆರೋಗ್ಯಕರ ಆಹಾರ ಸೇವನೆ ಕೂಡಾ. ಚೆನ್ನಾಗಿ ನೀರು ಕುಡಿಯಿರಿ.
  • ಆತಂಕಕಾರಿಯಾಗಿರಲು ಒಂದು ವಿಡಿಯೋ- ಭಯಾನಕ ವಿವರಗಳನ್ನೇ ಹೊಂದಿರಬೇಕೆಂದಿಲ್ಲ ಎಂಬುದನ್ನು ನೆನಪಿಡಿ. ರಕ್ತ ಮತ್ತು ಹಿಂಸಾಚಾರಗಳ ಬಗ್ಗೆ ಸಹಜವಾಗಿಯೇ ಎಚ್ಚರಿಕೆಯಿಂದ ಇರಬೇಕು. ಆದರೆ, ತೀರಾ ಭಾವನಾತ್ಮಕ ಹೇಳಿಕೆಗಳು ಕೂಡಾ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ಅದೇ ರೀತಿ ಬೈಗುಳಗಳ ವಿಡಿಯೋ ಕೂಡಾ. ಬೇರೆಬೇರೆ ವ್ಯಕ್ತಿಗಳಿಗೆ ಬೇರೆಬೇರೆ ವಿಷಯಗಳು ಒತ್ತಡ, ಆತಂಕ ಉಂಟುಮಾಡಬಹುದು. ಆದುದರಿಂದ ಸೂಕ್ಷ್ಮಜ್ಞರಾಗಿರಿ.
  • ವಿಡಿಯೋ ಸಂಕಲನದಲ್ಲಾಗಲೀ, ವರದಿಗಾರಿಕೆಯಲ್ಲಾಗಲೀ ನೀವು ಸತತ ವಾರಾಂತ್ಯಗಳಲ್ಲೂ ಕೆಲಸ ಮಾಡಿದ್ದರೆ, ಅಥವಾ ನಿರಂತರವಾಗಿ ಹಲವಾರು ದಿನಗಳ ಕಾಲ ನಿಮ್ಮ ಸಮಯ ಮೀರಿ ಕೆಲಸ ಮಾಡಿದ್ದರೆ- ನಿಮ್ಮ ರಜೆ ತೆಗೆದುಕೊಳ್ಳಿ. ಅವುಗಳಲ್ಲಿ ಕೆಲವನ್ನು ಬೇಗನೇ ತೆಗೆದುಕೊಳ್ಳಿ. ಯಾಕೆಂದರೆ ನಿಮ್ಮ ಚೇತರಿಕೆಗೂ ಸಮಯ ಬೇಕಾಗುತ್ತದೆ.

ಸಂಕಲನ ನಿರ್ಮಾಪಕರಿಗೆ:

  • ನಿಮಗೆ ಅಗತ್ಯ ಇರುವುದಕ್ಕಿಂತ ಹೆಚ್ಚು ನೋಡಬೇಡಿ. ಕೆಲವು ತಳಮಳಗೊಳಿಸುವ ವಿಡಿಯೋಗಳು ಪ್ರಸಾರವಾಗುತ್ತವೆ. ಅವುಗಳನ್ನು ಮತ್ತೆ ನೋಡಬೇಡಿ. ಆಗ ನಿಮಗೆ ನೀವು ನಿಮ್ಮನ್ನೇ ಸಾಬೀತುಪಡಿಸಬೇಕೆಂದು ಅನಿಸುತ್ತದೆ. ಮೊದಲೇ ನಿಮ್ಮ ಮೇಲ್ವಿಚಾರಕರು ಅಥವಾ ಮ್ಯಾನೇಜರ್ ಜೊತೆ  ಮಾತನಾಡಿ ವಿಡಿಯೋ ತುಣುಕನ್ನು ಹೇಗೆ ಬಳಸಬೇಕೆಂದು ಚರ್ಚಿಸಿ. ಆಗ ನೀವು ಮತ್ತೆ ಮತ್ತೆ ಅದೇ ವಿಡಿಯೋವನ್ನು ನೋಡಬೇಕಾಗುವುದಿಲ್ಲ. ಆ ತುಣುಕನ್ನು ತೆಗೆಯಲು ಮಾತ್ರ ನೋಡಿದರೆ ಸಾಕಾಗುತ್ತದೆ.
  • ವಿಶೇಷವಾಗಿ ಭಯಾನಕ ವಿವರಗಳುಳ್ಳ ಅಥವಾ ಆತಂಕಕಾರಿಯಾದ ವಿಡಿಯೋವನ್ನು ನಿಮ್ಮ ಮೇಲ್ವಿಚಾರಕರು ಅಥವಾ ಮ್ಯಾನೇಜರ್ ಅಥವಾ ಕಾನೂನು ತಂಡದ ಸದಸ್ಯರಿಗೆ ತೋರಿಸುವಾಗ ಮೊದಲೇ ಎಚ್ಚರಿಸಿ. ಉದಾಹರಣೆಗೆ “ನನ್ನ ವಿಡಿಯೋ ನೋಡಬಯಸುತ್ತೀರಾ?” ಎಂದು ಕೇಳುವ ಬದಲಿಗೆ “ಒಂದು ಹಿಂಸಾತ್ಮಕ ದಾಳಿಯ ನಂತರದ ತಕ್ಷಣದ ವಿಡಿಯೋ ನೋಡಬಯಸುತ್ತೀರಾ?” ಎಂದು ಕೇಳಿ. ಮುಂದೇನು ಬರಲಿದೆ ಎಂದು ನಿಮಗೆ ಗೊತ್ತಿಲ್ಲದೇ ಇದ್ದರೆ ಅದು ಗಮನಾರ್ಹವಾಗಿ ಹೆಚ್ಚು ತಳಮಳಕಾರಿಯಾಗಿರುತ್ತದೆ.
  • ಒಂದು ಮಾಮೂಲಿ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಅದು ಇಷ್ಟೊಂದು ಸರಳವಾಗಿರುವಂತದ್ದು:  ವಿಶೇಷವಾಗಿ ಕಷ್ಟಕರವಾದ ಒಂದು ವಿಡಿಯೋ ನೋಡುವ ಮೊದಲು ಎರಡೂ ಕಾಲುಗಳನ್ನು ನೆಲದ ಮೇಲೆ ಭದ್ರವಾಗಿ ಊರಿ. ನಂತರ ಎಂದಿಗಿಂತಲೂ ಆಳವಾಗಿ ಕೆಲವು ಉಸಿರುಗಳನ್ನು ತೆಗೆದುಕೊಳ್ಳಿ. ನಂತರ ಮೈಮುರಿದುಕೊಳ್ಳಿ. ನಂತರ ಕೆಲಸ ಮಾಡಬಹುದು. ನಿಮಗೆ ಬೇಕಾದಂತೆ ನಿಮಗೆ ಅನುಕೂಲ ಎನಿಸುವ ಒಂದು ಸಾಮಾನ್ಯ ಆಭ್ಯಾಸ ಬೆಳೆಸಿಕೊಳ್ಳಿ.
  • ಪ್ರತಿದಿನ ನಿರಂತರವಾಗಿ ಕಷ್ಟಕರ ವಿಡಿಯೋ ತುಣುಕುಗಳನ್ನು ನೋಡಬೇಕಾದ ಒಂದು ಪ್ರಾಜೆಕ್ಟ್‌ನಲ್ಲಿ ನೀವು ಕೆಲಸ ಮಾಡುತ್ತಿದ್ದರೆ, ಆ ಕುರಿತು ಮಾತನಾಡಿ. ಅದು ನಿಮ್ಮ ಮೇಲೆ ಮಾಡುತ್ತಿರುವ ಪರಿಣಾಮವನ್ನು ಒಪ್ಪಿಕೊಳ್ಳಿ ಮತ್ತು ನೀವು ಆ ಕೆಲಸ ಮಾಡುವಾಗ ನೀವು ನಿಮ್ಮನ್ನೇ ಹೇಗೆ ನೋಡಿಕೊಳ್ಳಲಿದ್ದೀರಿ ಎಂಬುದರ ಕುರಿತು ಸಕ್ರಿಯವಾಗಿ ಚಿಂತಿಸಿ.

ಕ್ಷೇತ್ರದಲ್ಲಿರುವ ನಿರ್ಮಾಪಕರಿಗೆ:

  • ತಳಮಳಗೊಳಿಸುವ ವರದಿಗಳನ್ನು ಮಾಡುವ ಹೊರತಾಗಿ, ನೀವು ಕ್ಷೇತ್ರದಲ್ಲಿ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಿಲ್ಲ ಎಂದು ತಳಮಳಗೊಳ್ಳುವುದು ಮತ್ತು ಅಸಹಾಯಕತೆಯನ್ನು ಅನುಭವಿಸುವುದು ಸಂಪೂರ್ಣವಾಗಿ ಸಾಮಾನ್ಯ ಎಂಬುದನ್ನು ನೆನಪಿಸಿಕೊಳ್ಳಿ. ನಿಮ್ಮ ಭಾವನೆಗಳನ್ನು ನಿಮ್ಮ ಸಹೋದ್ಯೋಗಿಗಳು ಅಥವಾ ನೀವು ಯಾರ ಜೊತೆ ಆರಾಮವಾಗಿರುತ್ತಿರೋ ಅವರ ಮುಂದೆ ಒಪ್ಪಿಕೊಳ್ಳಿ. ಅದನ್ನು ತಪ್ಪಿಸಿಕೊಳ್ಳುವುದರ ಬದಲು, ಅದರ ಕುರಿತು ಮಾತನಾಡುವುದೇ ಬಹಳ ಮುಖ್ಯ ವಿಷಯ.

ಅದು ವಿಶೇಷವಾಗಿ ತೀವ್ರವಾಗಿದ್ದರೆ:

  • ಒಂದು ಘಟನೆಯ ನಂತರ ಬೆಚ್ಚಿಬೀಳುವುದು ಅಥವಾ ಆತಂಕದಿಂದ ಇರುವುದು ಅಥವಾ ಆ ಕಷ್ಟಕರ ಚಿತ್ರಗಳು ನಿಮ್ಮ ಮನಸ್ಸಿನಲ್ಲಿ ಮತ್ತೆಮತ್ತೆ ಸುಳಿದಾಡುವುದು ಸಂಪೂರ್ಣ ಸಹಜ. ನೀವು ಹೇಗೆ ಭಾವಿಸುತ್ತಿದ್ದೀರೋ ಅದನ್ನು ಒಪ್ಪಿಕೊಳ್ಳುವುದು, ಸ್ವಲ್ಪ ಸಮಯವಾದರೂ ಸರಿ, ವಿರಾಮ ಪಡೆಯುವುದು ಉಪಯೋಗಕಾರಿ.
  • ಘಟನೆ ನಡೆದು ದಿನಗಳಲ್ಲಿ, ವಾರಗಳಲ್ಲಿ ಈ ಭಾವನೆಗಳು ಮಾಸದಿದ್ದಲ್ಲಿ ನಿಮ್ಮ ಸಂಸ್ಥೆಯ ಹಿರಿಯರಿಗೆ ಹೇಳುವುದೇ ಒಳ್ಳೆಯದು. ಅದು ವಿಶೇಷವಾಗಿ ತಡೆಯಲೇ ಸಾಧ್ಯವಿಲ್ಲದಂತೆ ಅನಿಸಿದರೆ, ಆದಷ್ಟು ಬೇಗ ನೆರವು ಪಡೆಯುವುದು ಒಳ್ಳೆಯದು.

ನೆರವು ಬೇಕಾದ ಪತ್ರಕರ್ತರು emergencies@cpj.orgಮೂಲಕ ಅಥವಾ ಸಿಪಿಜೆಯ ಭಾರತೀಯ ಪ್ರತಿನಿಧಿ ಕುಣಾಲ್ ಮುಜುಮ್ದಾರ್ kmajumder@cpj.org. ಮೂಲಕ ಸಿಪಿಜೆ ತುರ್ತು ವಿಭಾಗದ ನೆರವು ಪಡೆಯಬಹುದು. ಚುನಾವಣೆಗಳ ಸಮಯದಲ್ಲಿ ಪತ್ರಕರ್ತರ ಸುರಕ್ಷಿತತೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Journalist Safety: Electionsಗೆ ಭೇಟಿಕೊಡಿ.